ಹುಬ್ಬಳ್ಳಿ, ಜ.31 (DaijiworldNews/HR): "ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕನ್ನಡಿಗರು ಮತ್ತು ಮರಾಠಿಗರ ನಡುವೆ ವೈರತ್ವ ಬೆಳೆಸುವುದನ್ನು ಬಿಟ್ಟು ಮಹಾರಾಷ್ಟ್ರದಲ್ಲಿ ಕೊರೊನಾ ನಿಯಂತ್ರಿಸುವ ಕೆಲಸ ಮಾಡಲಿ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಹಾರಾಷ್ಟ್ರದಲ್ಲಿ ಅಸ್ಥಿರತೆ ಮತ್ತು ರಾಜಕೀಯ ಹಿನ್ನಡೆಯಾದಾಗ ಬೆಳಗಾವಿ ಗಡಿ ವಿಚಾರದ ಹೇಳಿಕೆಗಳು ಹೊರ ಬೀಳುತ್ತವೆ, ಗಡಿ ವಿಚಾರ ಮುಗಿದು ಹೋದ ಅಧ್ಯಾಯ. ಅಲ್ಲಿನ ಸರಕಾರ ಜನಪ್ರಿಯತೆ ಕಳೆದುಕೊಂಡಿದೆ. ಸರ್ಕಾರದ ಬಗ್ಗೆ ಜನರ ಆಕ್ರೋಶವಿರುವ ಕಾರಣ ಇಂತಹ ಹೇಳಿಕೆ ನೀಡಿ ಜನರ ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ" ಎಂದರು.
ಇನ್ನು "ಕೇಂದ್ರ ಸರಕಾರ ಮಂಡಿಸುವ ಬಜೆಟ್ ವೇಳೆ ರಾಜ್ಯಕ್ಕೆ ಏಮ್ಸ್ ಬರುವ ನಿರೀಕ್ಷೆ ಇದ್ದು, ಜೊತೆಗೆ ಫಾರ್ಮೋ ಪಾರ್ಕ್ನಂತಹ ಇನ್ನಿತರ ದೊಡ್ಡ ಮಟ್ಟದ ಪ್ರಾಜೆಕ್ಟ್ ನೀಡಿದರೆ, ಕೈಗಾರಿಕೆ ಕ್ಷೇತ್ರಕ್ಕೆ ಅನುಕೂಲ ಆಗಲಿದ್ದು, ಇದರ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಸಹ ಸಲ್ಲಿಸಲಾಗಿದೆ" ಎಂದು ಹೇಳಿದ್ದಾರೆ.