ಬಾಗಲಕೋಟೆ, ಜ.31 (DaijiworldNews/PY): "ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರಿಗೆ ಕಾಂಗ್ರೆಸ್ ಜೆಡಿಎಸ್ ಆಯಿತು. ಇದೀಗ ಬಿಜೆಪಿ ನಾಯಕರ ವಿರುದ್ದ ತಿರುಗಿಬಿದ್ದಿದ್ದು, ಇನ್ನು ಯಾವ ಪಕ್ಷ ಸೇರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ" ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಿಶ್ವನಾಥ್ ಅವರಿಗೆ ಮೂರು ಪಕ್ಷಗಳು ಮುಗಿದವು. ಇನ್ನೊಂದು ಪಕ್ಷ ಇದ್ದಿದ್ದರೆ ಈ ವೇಳೆಗಾಗಲೇ ಕರ್ಚೀಫ್ ಇಲ್ಲವೇ ಟವೆಲ್ ಹಾಕಿರುತ್ತಿದ್ದರು. ವಿಶ್ವನಾಥ್ ಅವರು ಇನ್ನು ಯಾವ ಪಕ್ಷಕ್ಕೆ ಹೋಗಲಿದ್ದಾರೆ? ಎನ್ನುವುದನ್ನು ಕಾದು ನೋಡೋಣ" ಎಂದರು.
"ವಿಶ್ವನಾಥ್ ಅವರು ಸಾಹಿತಿ ಕೋಟಾದಲ್ಲಿ ವಿಧಾನಪರಿಷತ್ ಸದಸ್ಯರಾಗಿದ್ದು, ಅವರು ವಿರೋಧಿಗಳನ್ನು ಸಾಹಿತ್ಯದ ಪರಿಭಾಷೆಯಲ್ಲಿಯೇ ಟೀಕೆ ಮಾಡುತ್ತಾರೆ. ಅವರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ" ಎಂದು ಹೇಳಿದರು.