ನವದೆಹಲಿ,ಜ.31 (DaijiworldNews/HR): "ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜದ ಅಪಮಾನಕ್ಕೆ ಸಾಕ್ಷಿಯಾದ ಇಡೀ ದೇಶ ಆಘಾತಕ್ಕೊಳಗಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, "ದೆಹಲಿಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಗಿದ್ದು, ಆ ಘಟನೆ ತುಂಬಾ ಬೇಸರವಾಗಿದೆ. ಇಡೀ ದೇಶಕ್ಕೆ ದುಷ್ಟಶಕ್ತಿಗಳಿಂದ ಅವಮಾನವಾಗಿದೆ" ಎಂದರು.
"ಇನ್ನು ಕೊರೊನಾ ವಿರುದ್ಧ ಒಂದು ವರ್ಷದಿಂದ ಹೋರಾಟ ಮಾಡುತ್ತಿದ್ದು, ದೇಶದಲ್ಲಿ ಅತೀದೊಡ್ಡ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಲಸಿಕಾ ಅಭಿಯಾನದಿಂದ ನಾವು ಗಮಿನಿಸಬೇಕಾದ ಅಂಶವೆಂದರೆ, ಭಾರತ ಇಂದು ಇತರೆ ರಾಷ್ಟ್ರಗಳಿಗೆ ನೆರವು ನೀಡುವಷ್ಟು ಸಮರ್ಥವಾಗಿದೆ ಎಂಬುದು. 30 ಲಕ್ಷ ಜನರಿಗೆ ಲಸಿಕೆ ಪೂರೈಸಲಾಗುತ್ತಿದ್ದು, ಇತರೆ ರಾಷ್ಟ್ರಗಳು ನಮಗೆ ಕೃತಜ್ಞತೆ ಸಲ್ಲಿಸಿವೆ" ಎಂದು ಹೇಳಿದ್ದಾರೆ.
ಟೀಂ ಇಂಡಿಯಾವನ್ನು ಪ್ರಶಂಸಿದ ಅವರು, "ಆರಂಭಿಕ ಸೋಲಿನ ಬಳಿಕ ಆಸ್ಟ್ರೇಲಿಯಾದಲ್ಲಿಯೇ ಆಸಿಸ್ ವಿರುದ್ಧ ತಿರುಗಿಬಿದ್ದು ಟೆಸ್ಟ್ ಸರಣಿ ಗೆಲ್ಲುವ ಮೂಲಕ ಟೀಂ ಇಂಡಿಯಾ ಇತಿಹಾಸ ಬರೆದಿದ್ದು, ನಮ್ಮ ತಂಡದ ಶ್ರಮ ಮತ್ತು ತಂಡದ ಕೆಲಸ ನಮಗೆ ಸ್ಫೂರ್ತಿ ನೀಡುತ್ತದೆ" ಎಂದರು.
"ಕೇಂದ್ರ ಸರಕಾರ ಕೃಷಿಯನ್ನು ಆಧುನೀಕರಣಗೊಳಿಸಲು ಬದ್ಧವಾಗಿದ್ದು, ಅನೇಕ ಕ್ರಮಗಳನ್ನು ಕೈಗೊಂಡಿದೆ. ಈ ಪ್ರಯತ್ನಗಳನ್ನು ಇನ್ನೂ ಮುಂದುವರೆಸಲಾಗುತ್ತದೆ" ಎಂದು ತಿಳಿಸಿದ್ದಾರೆ.
"ಇನ್ನು 4 ಭಾರತೀಯ ಮಹಿಳಾ ಪೈಲಟ್ಗಳು ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ನೇರವಾಗಿ ವಿಮಾನ ಚಲಾಯಿಸಿದ್ದು, 225 ಜನರನ್ನು ಹೊತ್ತ ವಿಮಾನವು 10 ಸಾವಿರ ಕಿಮೀ ಪ್ರಯಾಣ ಮಾಡಿದೆ. ಯಾವುದೇ ಕ್ಷೇತ್ರವಾಗಲೀ, ರಾಷ್ಟ್ರದ ಮಹಿಳೆಯರ ಭಾಗವಹಿಸುವಿಕೆ ನಿರಂತರವಾಗಿ ಹೆಚ್ಚುತ್ತಿರುವುದು ಹೆಮ್ಮೆಯ ವಿಷಯವಾಗಿದೆ" ಎಂದರು.
"ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಮಾತನಾಡುವಂತೆ ಅನೇಕ ಮಂದಿ ಆಗ್ರಹಿಸುತ್ತಿದ್ದು, ಸರ್ಕಾರದ ಜೊತೆ ರಸ್ತೆ ಸುರಕ್ಷತೆ ಜನರು ಕೈಜೋಡಿಸಬೇಕು. ಜನರ ಜೀವ ಹಾನಿಯನ್ನು ಕೂಡ ತಪ್ಪಿಸಬೇಕು. ರಸ್ತೆ ಸುರಕ್ಷತೆ ಬಗ್ಗೆ ನೀವು ಘೋಷವಾಕ್ಯಗಳನ್ನು ಬರೆದು ಕಳುಹಿಸಬಹುದು. ಫಾಸ್ಟ್ ಟ್ಯಾಗ್ನಿಂದಾಗಿ ಟೋಲ್ ಬೂತ್ಗಳಲ್ಲಿ ಕಾಯುವ ಸಮಯ ಕಡಿತವಾಗಿದೆ ಜೊತೆಗೆ ಇಂಧನವೂ ಕೂಡ ಉಳಿತಾಯವಾಗಲಿದೆ" ಎಂದು ಹೇಳಿದ್ದಾರೆ.