ಕೋಲ್ಕತ್ತಾ, ಜ.31 (DaijiworldNews/PY): ಅನಾರೋಗ್ಯದ ಕಾರಣದಿಂದ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ (ಬಿಸಿಸಿಐ) ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರು ರವಿವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
"ಗಂಗೂಲಿ ಅವರಿಗೆ ಸ್ಟಂಟ್ ಅಳವಡಿಸಿರುವ ಕಾರಣ ಅವರನ್ನು ಮನೆಯಲ್ಲೇ ನಿಗಾದಲ್ಲಿರಿಸಲಾಗುತ್ತದೆ. ಇದಕ್ಕಾಗಿ ತಜ್ಞ ವೈದ್ಯರ ತಂಡ ಗಂಗೂಲಿ ಅವರ ನಿವಾಸಕ್ಕೆ ತೆರಳಿ ಆಗಾಗ ತಪಾಸಣೆ ಮಾಡಲಿದ್ದಾರೆ" ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.
"ಸೌರವ್ ಗಂಗೂಲಿ ಅವರ ಆರೋಗ್ಯ ಉತ್ತಮವಾಗಿದೆ. ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಸಹಜ ಸ್ಥಿತಿಗೆ ಬರಲಿದ್ದಾರೆ" ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಸೌರವ್ ಗಂಗೂಲಿ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಕೋಲ್ಕತ್ತಾದ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಜನವರಿ 2 ರಂದು ಗಂಗೂಲಿ ಅವರಿಗೆ ಲಘು ಹೃದಯಾಘಾತವಾಗಿದ್ದು ವುಡ್ಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯದ ರಕ್ತನಾಳಗಳಲ್ಲಿ ಬ್ಲಾಕ್ಗಳು ಕಂಡುಬಂದ ಹಿನ್ನೆಲೆ ಆ್ಯಂಜಿಯೊಪ್ಲಾಸ್ಟಿ ನಡೆಸಿ, ಒಂದು ಕಡೆ ಸ್ಟೆಂಟ್ ಅಳವಡಿಸಲಾಗಿತ್ತು. ಜನವರಿ 7 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.