ಮಂಗಳೂರು, ಜ.31 (DaijiworldNews/PY): ಐದು ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವು ಜ.31ರ ರವಿವಾರ ಬೆಳಗ್ಗೆ ಇಲ್ಲಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಆರಂಭವಾಯಿತು.
ದ.ಕ ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಅವರ ಪುತ್ರಿಗೆ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿಯವರು ಪೋಲಿಯೋ ಹನಿ ಹಾಕಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಶಾಸಕರು ಉಳಿದ ಮಕ್ಕಳಿಗೆ ಪೋಲಿಯೋ ಹನಿ ಹಾಕಿದರು.
ಏತನ್ಮಧ್ಯೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, "ರೋಗಕ್ಕೆ ತುತ್ತಾಗದಂತೆ ರಕ್ಷಿಸುವ ಸಲುವಾಗಿ ತಮ್ಮ ಮಕ್ಕಳಿಗೆ ಎರಡು ಹನಿ ಪೋಲಿಯೋ ಹನಿ ಹಾಕಿಸಿ" ಎಂದು ಮನವಿ ಮಾಡಿದರು.
"ಮಾಧ್ಯಮವು ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ವ್ಯಾಪಕವಾಗಿ ಪ್ರಸಾರ ಮಾಡಬೇಕು. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೂಡಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಮ್ಮ ರಾಜ್ಯದಲ್ಲಿ ಸುಮಾರು 64 ಲಕ್ಷ ಮಕ್ಕಳಿಗೆ ಪೋಲಿಯೋ ಹನಿಗಳನ್ನು ನೀಡಲಾಗುತ್ತಿದೆ" ಎಂದರು.
"ಈ ಕಾರ್ಯಕ್ರಮವನ್ನು ಮೊದಲು ಜ.17ರಂದು ನಡೆಸಲು ತೀರ್ಮಾನ ಮಾಡಲಾಗಿತ್ತು. ಆ ವೇಳೆ ಕೊರೊನಾ ಲಸಿಕೆ ರಾಜ್ಯಕ್ಕೆ ಆಗಮಿಸಿದ್ದು, ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಮುಂದೂಡಲಾಯಿತು" ಎಂದು ತಿಳಿಸಿದರು.
"ಕರ್ನಾಟಕದಲ್ಲಿ 85,05,060 ಡೋಸ್ ಪಲ್ಸ್ ಪೋಲಿಯೊ ವ್ಯಾಕ್ಸಿನೇಷನ್ ಲಭ್ಯವಿದೆ. ಇದನ್ನು ನಿರ್ವಹಿಸಲು 1,10,179 ವ್ಯಾಕ್ಸಿನೇಟರ್ಗಳಿವೆ. 6,645 ಮೇಲ್ವಿಚಾರಕರ ತಂಡಗಳು ಮತ್ತು 904 ಮೊಬೈಲ್ ತಂಡಗಳನ್ನು ಸಹ ಸಿದ್ಧಪಡಿಸಲಾಗಿದೆ. ರಾಜ್ಯದಲ್ಲಿ 32,908 ಬೂತ್ಗಳಲ್ಲಿ ಲಸಿಕೆಗಳನ್ನು ನೀಡಲಾಗುತ್ತಿದೆ" ಎಂದು ತಿಳಿಸಿದರು.