ನವದೆಹಲಿ, ಜ.31 (DaijiworldNews/PY): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು, "ಹೆಚ್ಚು ಭಯಪಡಬೇಡಿ, ಧೈರ್ಯ ಮಾಡಿ ಚೀನಾದ ಬಗ್ಗೆ ಮಾತನಾಡಿ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಸಿಕ್ಕಿಂನಲ್ಲಿ ಚೀನಾ ಸೈನ್ಯವು ಹೊಸ ರಸ್ತೆ ಹಾಗೂ ಪೋಸ್ಟ್ ಅನ್ನು ನಿರ್ಮಾಣ ಮಾಡುತ್ತಿದೆ. ಸರ್ಕಾರಕ್ಕೆ ಚೀನಾದ ಮುಂದೆ ಮಾತನಾಡಲು ಧೈರ್ಯವಿದೆಯೇ?" ಎಂದು ಪ್ರಶ್ನಿಸಿದ್ದಾರೆ.
"ಹೆಚ್ಚು ಭಯಪಡುವ ಅವಶ್ಯಕತೆ ಇಲ್ಲ. ಇಂದು ಧೈರ್ಯ ಮಾಡಿ ಚೀನಾದ ಬಗ್ಗೆ ಮಾತನಾಡಿ" ಎಂದಿದ್ದಾರೆ.
ಉಪಗ್ರಹ ಚಿತ್ರಗಳಲ್ಲಿ ಸಿಕ್ಕಿಂ ಗಡಿಯಲ್ಲಿ ಚೀನಾ ಸೈನ್ಯವು ಹೊಸ ರಸ್ತೆ ಹಾಗೂ ಪೋಸ್ಟ್ ಅನ್ನು ನಿರ್ಮಾಣ ಮಾಡುತ್ತಿರುವುದು ಸಾಬೀತಾಗಿದೆ ಎನ್ನುವ ಸುದ್ದಿಯನ್ನು ಟ್ವೀಟರ್ ಪೋಸ್ಟ್ ಮಾಡಿದ್ದಾರೆ.
ಸಿಕ್ಕಿಂ ಗಡಿ ಪ್ರದೇಶದಲ್ಲಿ ಕಳೆದ ವರ್ಷ ನಡೆದ ಸಂಘರ್ಷದಲ್ಲಿ ಭಾರತ ಸೇನೆಯ ಹಲವು ಮಂದಿ ಯೋಧರು ಗಾಯಗೊಂಡಿದ್ದರು. ಸಿಕ್ಕಿಂನ ನಾಕು ಲಾ ಪ್ರದೇಶದಲ್ಲಿ ಇತ್ತೀಚೆಗೆ ಮತ್ತೆ ಸಂಘರ್ಷವಾಗಿತ್ತು. ನಂತರ ಕಮಾಂಡರ್ಗಳ ಮಾತುಕತೆಯ ಮುಖೇನ ವಿವಾದ ಬಗೆಹರಿಸಲಾಯಿತು ಎನ್ನುವುದನ್ನು ಭಾರತೀಯ ಸೇನೆ ತಿಳಿಸಿತ್ತು.
ಈ ನಡುವೆ, ಭಾರತ ಹಾಗೂ ಚೀನಾ ಶೀಘ್ರದಲ್ಲೇ ಲಡಾಖ್ ಗಡಿಯಿಂದ ಸೇನೆಯನ್ನು ಹಿಂಪಡೆಯಲು ತೀರ್ಮಾನ ಮಾಡಿತ್ತು. ಇದಲ್ಲದೇ, ರಾಜತಾಂತ್ರಿಕ ಮಾತುಕತೆಯನ್ನು ಕೂಡಾ ಮುಂದುವರೆಸಲು ತೀರ್ಮಾನ ಮಾಡಿದೆ.