ನವದೆಹಲಿ, ಜ.31 (DaijiworldNews/PY): "ದೇಶದ ಪ್ರತಿ ಮಗುವಿಗೆ 2022ರ ವೇಳೆಗೆ ಸಮರ್ಪಕವಾದ ಆರೋಗ್ಯ ಸೇರಿದಂತೆ ಶಿಕ್ಷಣ, ಪೌಷ್ಠಿಕಾಂಶದ ಸೌಲಭ್ಯವನ್ನು ಹಾಗೂ ದೇಶದ ಮಹಿಳೆಯರಿಗೆ ಸುರಕ್ಷತೆಯನ್ನು ಒದಗಿಸಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಧ್ಯೇಯ ವಾಕ್ಯ" ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಬ್ರಿಟಿಷ್ ಅಸೋಸಿಯೇಷನ್ ಆಫ್ ಫಿಜಿಶಿಯನ್ಸ್ ಆಫ್ ಇಂಡಿಯನ್ ಓರಿಜಿನ್ನ ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, "75ನೇ ಸ್ವಾತಂತ್ರ್ಯ ದಿನಾಚರಣೆ ವರ್ಷದ ಸಂದರ್ಭ ನವ ಭಾರತದಲ್ಲಿ ರಾಷ್ಟ್ರೀಯತೆ ಹಾಗೂ ಮಾನವತಾವಾದ ಮಾತ್ರವೇ ಮೇಲುಗೈ ಸಾಧಿಸಲಿದೆ" ಎಂದಿದ್ದಾರೆ.
"ದೇಶದ ಪ್ರತಿ ಮಗುವಿಗೆ 2022ರ ವೇಳೆಗೆ ಪ್ರತಿ ಮಗುವಿಗೆ ಸಮರ್ಪಕವಾದ ಆರೋಗ್ಯ ಸೇರಿದಂತೆ ಶಿಕ್ಷಣ, ಪೌಷ್ಠಿಕಾಂಶದ ಸೌಲಭ್ಯವನ್ನು ಹಾಗೂ ದೇಶದ ಮಹಿಳೆಯರಿಗೆ ಸುರಕ್ಷತೆಯನ್ನು ಒದಗಿಸಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಧ್ಯೇಯ ವಾಕ್ಯ. 2022ರ ವೇಳೆಗೆ ಭಾರತ 75ನೇ ಸ್ವಾಂತಂತ್ರ್ಯ ಪಡೆದ ವರ್ಷಕ್ಕೆ ಪ್ರವೇಶಿಸಿದ ಸಂದರ್ಭ, ಭಾರತಕ್ಕೆ ನಾವು ಖಂಡಿತವಾಗಿಯೂ ಕೂಡಾ ಹೊಸ ರೂಪವನ್ನು ನೀಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
"ಕೊರೊನಾ ಸಮಯದಲ್ಲಿ ಶೀಘ್ರವಾಗಿ ದೇಶದ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಲಾಯಿತು. ವೈರಸ್ ಅನ್ನು ಪ್ರತ್ಯೇಕಿಸಿದ ವಿಶ್ವದ ಮೊದಲ ಕೆಲವು ದೇಶಗಳ ಪೈಕಿ ಭಾರತವೂ ಸೇರ್ಪಡೆಯಾಯಿತು" ಎಂದಿದ್ದಾರೆ.
"ಕೊರೊನಾ ಲಸಿಕೆಗಳನ್ನು ತಯಾರಿಸುವಲ್ಲಿ ವಿಜ್ಞಾನಿಗಳ ಪ್ರಯತ್ನವನ್ನು ಹಾಗೂ ಅವರ ಕೊಡುಗೆಯನ್ನು ಶ್ಲಾಘಿಸಿದ ಅವರು, ಅತೀ ಕಡಿಮೆ ಸಮಯದಲ್ಲಿ ನಮ್ಮ ವಿಜ್ಞಾನಿಗಳು ಸ್ಥಳೀಯವಾಗಿ ತಯಾರಿಸಿದ ಎರಡು ಲಸಿಕೆಗಳನ್ನು ನೀಡುವಲ್ಲಿ ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ" ಎಂದು ಹೇಳಿದ್ದಾರೆ.