ಮುಂಬೈ, ಜ.31 (DaijiworldNews/PY): "ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳು ಮಂಡಿ ವ್ಯವಸ್ಥೆಯ ಅಧಿಕಾರವನ್ನು ದುರ್ಬಲಗೊಳಿಸಲಿವೆ" ಎಂದು ಮಾಜಿ ಕೇಂದ್ರ ಸಚಿವ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೇಂದ್ರದ ಹೊಸ ಕೃಷಿ ಕಾಯ್ದೆಗಳು ಕನಿಷ್ಠ ಬೆಂಬಲ ಬೆಲೆ ಸಂಗ್ರಹಣೆಯ ಮೇಲೆ ಪ್ರತಿಕೂಲವಾದ ಪರಿಣಾಮ ಬೀರಲಿದೆ. ಅಲ್ಲದೇ ಮಂಡಿ ವ್ಯವಸ್ಥೆಯ ಅಧಿಕಾರವನ್ನು ದುರ್ಬಲಗೊಳಿಸಲಿವೆ" ಎಂದಿದ್ದಾರೆ.
"ಈ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿರುವ ರೈತರು, ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಈ ವೇಳೆ ಎಂಎಸ್ಪಿ ಯಾಂತ್ರಿಕ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಮತ್ತಷ್ಟು ಬಲಪಡಿಸಬೇಕು" ಎಂದು ತಿಳಿಸಿದ್ದಾರೆ.
"ನೂತನ ಕೃಷಿ ಕಾಯ್ದೆ ಖಾಸಗಿ ವ್ಯಾಪಾರಿಗಳಿಂದ ವಸೂಲಿ ಸೇರಿದಂತೆ ಶುಲ್ಕ ಸಂಗ್ರಹಣೆ, ವಿವಾದ ಪರಿಹಾರ, ಕೃಷಿ ವ್ಯಾಪಾರ ಪರವಾನಗಿ ಹಾಗೂ ಇ-ವಹಿವಾಟಿನ ನಿಯಮಗಳಿಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ಮಂಡಿಯನ್ನು ದುರ್ಬಲಗೊಳಿಸುತ್ತದೆ" ಎಂದು ಹೇಳಿದ್ದಾರೆ.