ಶ್ರೀನಗರ, ಜ.31 (DaijiworldNews/PY): ನೂತನವಾಗಿ ನೇಮಕವಾಗಿದ್ದ ಉಗ್ರ, ಜೈಷ್-ಎ-ಮೊಹಮ್ಮದ್ ಹಾಗೂ ಲಷ್ಕರ್-ಎ-ಮುಸ್ತಾಫಾ ಉಗ್ರ ಸಂಘಟನೆಗೆ ಸೇರಿದ ನಾಲ್ವರು ಉಗ್ರ ಸಹಚರರನ್ನು ಬಂಧಿಸಲಾಗಿದೆ ಎಂದು ಜಮ್ಮ-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬಂಧಿತರನ್ನು ಇಮ್ರಾನ್ ಅಹ್ಮದ್ ಹಜಂ ಹಾಘೂ ಇರ್ಫಾನ್ ಅಹ್ಮದ್ ಅಹೆಂಗರ್ ಎಂದು ಗುರುತಿಸಲಾಗಿದೆ. ಇತ್ತಿಚೆಗೆ ಇವರಿಬ್ಬರು ನಿಷೇಧಿತ ಎಲ್ಇಎಂ/ಜೆಇಎಂ ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಯಾಗಿದ್ದರು.
ಅನಂತ್ನಾಗ್ ಹಾಗೂ ಬಿಜ್ಬೆಹರಾ ಪಟ್ಟಣಗಳಲ್ಲಿ ಭಯೋತ್ಪಾದಕ ದಾಳಿಯ ವಿಚಾರದ ಬಗ್ಗೆ ಮಾಹಿತಿ ಸಿಕ್ಕಿದ ಬಳಿಕ ಪೊಲೀಸರು ವಿವಿಧ ಸ್ಥಳಗಳಲ್ಲಿ ತಪಾಸಣೆ ತೀವ್ರಗೊಳಿಸಿದ್ದರು. ಈ ವೇಳೆ ನಡೆಸಿದ ಕಾರ್ಯಾಚರಣೆಯಲ್ಲಿ ಭದ್ರತಾಪಡೆಗಳು ಉಗ್ರರನ್ನು ಸೆರೆಹಿಡಿದಿದ್ದಾರೆ.
ಬಿಜ್ಬೆಹೆರಾದ ಡೊನಿಪುರದ ಚೆಕ್ಪೋಸ್ಟ್ವೊಂದರಲ್ಲಿ ಕಾರಿನಲ್ಲಿದ್ದ ಇಬ್ಬರು ಉಗ್ರರು ಪಲಾಯನ ಮಾಡಲು ಯತ್ನಿಸಿದ್ದರು. ಆದರೆ, ಪೊಲೀಸರು ಅವರನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.
ಎರಡು ಪಿಸ್ತೂಲ್ ಸೇರಿದಂತೆ ಮದ್ದುಗುಂಡು ಹಾಗೂ ಶಸ್ತ್ರಾಸ್ತ್ರಗಳನ್ನು ಉಗ್ರರಿಂದ ವಶಪಡಿಸಿಕೊಳ್ಳಲಾಗಿದೆ. ಈ ಉಗ್ರರು ಭದ್ರತಾ ಪಡೆಯನ್ನು ಗುರಿಯಾಗಿಸಿಕೊಂಡು ಐಇಡಿ ಸ್ಪೋಟ ನಡೆಸಲು ಸಂಚು ನಡೆಸಿದ್ದರು ಎನ್ನುವ ವಿಚಾರ ತನಿಖೆಯ ಸಂದರ್ಭ ತಿಳಿದುಬಂದಿದೆ.
ತನಿಖೆಯ ವೇಳೆ ಜೆಎಂನ ನಾಲ್ವರು ಉಗ್ರ ಸಹಚರರನ್ನು ಬಂಧಿಸಲಾಗಿದ್ದು, ಬಂಧಿತರನ್ನು ಬಿಲಾಲ್ ಅಹ್ಮದ್ ಕುಮಾರ್, ತವ್ಫೀಕ್ ಅಹ್ಮದ್ ಲಾವೆ, ಮುಜಾಮಿಲ್ ಅಹ್ಮದ್ ವಾನಿ ಹಾಗೂ ಆದಿಲ್ ಅಹ್ಮದ್ ರಾಥರ್ ಎಂದು ಗುರುತಿಸಲಾಗಿದೆ.
ಬಂಧಿತ ಉಗ್ರ ಸಹಚರರಿಂದ ಎರಡು ಗ್ರೆನೇಡ್ ಸೇರಿದಂತೆ 30 ಎಕೆ-47 ಮದ್ದುಗುಂಡುಗಳು, ಒಂದು ಕೆ.ಜಿ ಸ್ಫೋಟಕ ವಸ್ತುಗಳು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.