ಉಳ್ಳಾಲ,ಜ.30 (DaijiworldNews/HR): "ರಾಜ್ಯಾದ್ಯಂತ ಮುಂದಿನ ತಿಂಗಳಲ್ಲಿ 5 ಕಡೆಗಳಲ್ಲಿ ಚಾಲನಾ ತರಬೇತಿ ಕೇಂದ್ರದ ಸ್ಥಾಪನೆಗೆ ಉದ್ದೇಶಿಸಲಾಗಿದ್ದು, ಸರಕಾರದಿಂದ ಮಂಜೂರಾತಿಯೂ ದೊರೆತು ತಲಾ 15 ಕೋಟಿ ರೂ. ವೆಚ್ಚದಲ್ಲಿ ಕಟ್ಟಡಗಳ ಸ್ಥಾಪನೆಯಾಗಲಿದೆ" ಎಂದು ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಸಾರಿಗೆ ಇಲಾಖೆ ದ.ಕ ಜಿಲ್ಲೆ ಆಯೋಜಿಸಿದ್ದ ಪಜೀರು ಗ್ರಾಮದ ಕೆಐಎಡಿಬಿ ಕಂಬಳಪದವು ಬಳಿ ನಿರ್ಮಾಣಗೊಂಡ ಭಾರೀ ವಾಹನ ಚಾಲನಾ ತರಬೇತಿ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, "ಹೊಳಲ್ಕೆರೆಯಲ್ಲಿ ನಾಳೆ ಚಾಲನಾ ಕೇಂದ್ರದ ಉದ್ಘಾಟನೆಯಾಗಲಿದ್ದು, 15 ಕೋಟಿ ರೂ. ನಲ್ಲಿ ನಿರ್ಮಾಣ ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಲೈಟ್ ಮೋಟಾರ್ ವಾಹನದ ಚಾಲನೆ ತರಬೇತಿ ಕೇಂದ್ರವನ್ನೂ ಕಂಬಳಪದವಿನಲ್ಲಿ ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದ ಅವರು ಆರ್ಟಿಓ ಆರಂಭಿಸಲು ಕೇಂದ್ರ ಸರಕಾರದ ಹೊಸ ನಿಯಮಾವಳಿಗಳು ಇನ್ನಷ್ಟೇ ಜಾರಿಯಾಗಬೇಕಿದೆ. ಆ ಬಳಿಕ ಸಿಬ್ಬಂದಿ ನೇಮಕ ಆದಲ್ಲಿ ಆರಂಭಿಸಬಹುದು. ಈಗಾಗಲೇ ಸಿಬ್ಬಂದಿ ಕೊರತೆ ಬಹಳಷ್ಟಿದೆ" ಎಂದರು.
"ದ.ಕ. ಜಿಲ್ಲೆಯ ಇಬ್ಬರು ಸಚಿವರು ಸರಳ ವ್ಯಕ್ತಿತ್ವದವರು. ವೈಭವೀಕೃತ ವ್ಯಕ್ತಿಗಳಾಗಬಾರದು ಅನ್ನುವ ಉದ್ದೇಶದ ಸಚಿವರು ಕಾರ್ಯಾಚರಿಸುತ್ತಿದ್ದಾರೆ. ಇತರೆ ಎಲ್ಲಾ ಸಚಿವರಿಗೂ ಮಾದರಿ. ಸಾರಿಗೆ ಇಲಾಖೆಯಲ್ಲಿ ಐದು ವರ್ಷಗಳಲ್ಲಿ ಅಪರಾಧ-ಅಪಘಾತ ನಡೆಸದವರಿಗೆ ಇಲಾಖೆ ವತಿಯಿಂದ ಬೆಳ್ಳಿ ಪದಕ ನೀಡಿ ಗೌರವಿಸಲಾಗುತ್ತದೆ. 15 ವರ್ಷಗಳಲ್ಲಿ ಅಪರಾಧ-ಅಪಘಾತವೇ ನಡೆಸದವರಿಗೆ ಚಿನ್ನದ ಪದಕವನ್ನು ಮುಖ್ಯಮಂತ್ರಿ ಕೈಯಿಂದಲೇ ಕೊಡಿಸಲಾಗುತ್ತದೆ. ರಾಜ್ಯದಲ್ಲಿ ಭಾರೀ ವಾಹನಗಳಿಂದಲೇ ಹೆಚ್ಚಿನ ಅಪಘಾತಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಭಾರೀ ವಾಹನಗಳ ಚಾಲನೆಗೆ ಕಡ್ಡಾಯ ತರಬೇತಿ ನೀಡಿದಾಗ ಮಾತ್ರ ಅಪಘಾತಗಳನ್ನು ತಡೆಯಬಹುದು . ಚಾಲಕರ ಜತೆಗೆ ಜನರನ್ನೂ ಜಾಗೃತಿ ಮಾಡುವ ಕಾರ್ಯಗಳಾಗಬೇಕು. ಜೀವಕ್ಕೆ ಅಮೂಲ್ಯವಾದ ಬೆಲೆಯಿದೆ" ಎಂದು ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೀನುಗಾರಿಕೆ ಹಾಗೂ ಬಂದರುಗಳ ಮತ್ತು ಒಳನಾಡು ಜಲಸಾರಿಗೆ ಸಚಿವ ಅಂಗಾರ ಎಸ್. ಮುಖ್ಯ ಅತಿಥಿಯಾಗಿದ್ದರು. ಶಾಸಕ ಯು.ಟಿ ಖಾದರ್ ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ದಿ ಮೈಸೂರ್ ಇಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ನಿಗಮದ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಕರ್ನಾಟಕ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ, ಜಿ.ಪಂ ಸದಸ್ಯೆ ಮಮತಾ ಡಿ.ಎಸ್ ಗಟ್ಟಿ, ತಾ.ಪಂ ಸದಸ್ಯ ನವೀನ್ ಪಾದಲ್ಪಾಡಿ, ಬೆಂಗಳೂರು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯ ಆಯುಕ್ತ ಎನ್. ಶಿವಕುಮಾರ್, ಬೆಂಗಳೂರು ಸಾರಿಗೆ ಇಲಾಖೆಯ ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್, ಶಿವಮೊಗ್ಗ ವಿಭಾಗದ ಜಂಟಿ ಸಾರಿಗೆ ಆಯುಕ್ತ ಎನ್. ಜಿ. ಗಾಯತ್ರಿದೇವಿ, ುಪಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ ವರ್ಣೇಕರ್ ಉಪಸ್ಥಿತರಿದ್ದರು.