ವಿಜಯಪುರ, ಜ.30 (DaijiworldNews/HR): "ಯುಗಾದಿ ಬಳಿಕ ಹೊಸ ವರ್ಷದಲ್ಲಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದ್ದು, ಉತ್ತರ ಕರ್ನಾಟಕ ಭಾಗದವರೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ" ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಂಬರುವ ಯುಗಾದಿ ಹಬ್ಬದ ಬಳಿಕ ಕರ್ನಾಟಕದಲ್ಲಿ ಹೊಸ ಮುಖ್ಯಮಂತ್ರಿ ಬರುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ನಾನು ಮಂತ್ರಿ ಸ್ಥಾನ ಬೇಕು ಎಂದು ದಾವಣಗೆರೆಯಲ್ಲಿ ಮಾತನಾಡಿಲ್ಲ, ಬಿಜೆಪಿ ಬಿಟ್ಟು ಎಲ್ಲೂ ಹೋಗಿಲ್ಲ. ಮುಂದಿನ ಮಂತ್ರಿ ಸ್ಥಾನದಲ್ಲಿ ನಮ್ಮವರೇ ಬರುತ್ತಾರೆ, ಕಾಯಿರಿ" ಎಂದರು.
ಇನ್ನು "ರಾಮ ಮಂದಿರ ನಿರ್ಮಾಣ ನಿಧಿ ಸಂಗ್ರಹ ವಾಹನದ ಮೇಲೆ ಕಲ್ಲು ಎಸೆಯುವ ಮೂಲಕ ಬೆಂಗಳೂರು ಮತೀಯ ಗಲಭೆ ಸೃಷ್ಟಿಸುವ ಹಾಟ್ಸ್ಪಾಟ್ ಆಗುತ್ತಿದೆ ಎಂಬುದಕ್ಕೆ ಮತ್ತೊಮ್ಮೆ ಸಾಕ್ಷ ಒದಗಿಸಿದೆ. ರಾಜ್ಯದಲ್ಲಿ ಕೋಮು ಗಲಭೆಯನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗುತ್ತಿದ್ದು, ಕೋಮು ಗಲಭೆ ಸೃಷ್ಟಿಸುವವರ ಜೊತೆ ಮುಖ್ಯಮಂತ್ರಿ, ಗೃಹ ಸಚಿವರು ಸಲುಗೆಯ ಸ್ನೇಹ ಹೊಂದಿದರೆ ಇಂಥ ಸ್ಥಿತಿ ರಾಜ್ಯಕ್ಕೆ ತಪ್ಪಿದ್ದಲ್ಲ" ಎಂದು ಹೇಳಿದ್ದಾರೆ.