ನವದೆಹಲಿ,ಜ.30 (DaijiworldNews/HR): "ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷಗಳವರೆಗೂ ಅಮಾನತಿನಲ್ಲಿಡುವ ಪ್ರಸ್ತಾವನೆಗೆ ಸರ್ಕಾರ ಬದ್ಧವಾಗಿದೆ" ಎಂದು ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಇಂದು ಶನಿವಾರ ನಡೆದ ಸರ್ವ ಪಕ್ಷ ಸಭೆಯಲ್ಲಿ ಮಾತನಾಡಿದ ಅವರು, "ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ರೈತ ಮುಖಂಡರೊಂದಿಗೆ ನಡೆದಿರುವ 11ನೇ ಸುತ್ತಿನ ಮಾತುಕತೆಯಲ್ಲಿ ಕೇಂದ್ರ ಸರ್ಕಾರವು ಪ್ರಸ್ತಾಪಿಸಿದ ಕೊಡುಗೆಗೆ ಇಂದಿಗೂ ಬದ್ಧವಾಗಿದೆ" ಎಂದರು.
ನೂತನ ಕೃಷಿ ಸುಧಾರಣಾ ಕಾಯ್ದೆಗಳನ್ನು 18 ತಿಂಗಳು ಅಮಾನತಿನಲ್ಲಿಡುವುದಾಗಿ ಸರ್ಕಾರ ಪ್ರಸ್ತಾಪಿಸಿದ್ದು, ಪ್ರತಿಭಟನಾ ನಿರತ ರೈತರು ಹಾಗೂ ವಿರೋಧ ಪಕ್ಷಗಳು ಕಾಯ್ದೆಗಳನ್ನು ರದ್ದು ಪಡಿಸುವಂತೆ ಒತ್ತಾಯಿಸಿವೆ.
ಇನ್ನು ಈ ಕುರಿತು ಮಾತನಾಡಿರುವ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, "ಸರ್ಕಾರವು ಚರ್ಚೆ ನಡೆಸಲು ಮುಕ್ತವಾಗಿರುವುದಾಗಿ ಕೃಷಿ ಸಚಿವ ತೋಮರ್ ತಿಳಿಸಿದ್ದು, ನಾನು (ತೋಮರ್) ಮಾತುಕತೆಗೆ ಸಿದ್ಧವಿದ್ದೇನೆ, ಕೇವಲ ಒಂದು ಫೋನ್ ಕರೆಯ ಅಂತರದಲ್ಲಿದಲ್ಲಿರುವುದಾಗಿ ತಿಳಿಸಿದ್ದಾರೆ" ಎಂದರು.