ಮಂಗಳೂರು, ಜ.30 (DaijiworldNews/PY): "ಕೊರೊನಾದ ಬಳಿಕ 1,760 ಕೋಟಿ.ರೂ ಮೊತ್ತವನ್ನು ಸರಕಾರದಿಂದ ಪಡೆದು 1.30 ಲಕ್ಷ ಸಾರಿಗೆ ಸಿಬ್ಬಂದಿಗಳಿಗೆ ವೇತನ ನೀಡಲಾಗಿದೆ" ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕೊರೊನಾ ಲಾಕ್ಡೌನ್ ಸಂದರ್ಭ ಎರಡು ತಿಂಗಳುಗಳ ಕಾಲ ಸಾರಿಗೆ ಇಲಾಖೆ ಸಂಪೂರ್ಣ ಸ್ಥಗಿತಗೊಂಡಿತ್ತು. ಎರಡು ತಿಂಗಳ ಸಂಬಳ ವಿಳಂಬವಾಗಿದ್ದರೂ ಕೂಡಾ, ಸಾರಿಗೆ ಇಲಾಖೆಯು ಸರ್ಕಾರದಿಂದ 650 ಕೋಟಿ ರೂ.ಗಳನ್ನು ಪಡೆಯುವ ಮೂಲಕ ಶೇ.100ರಷ್ಟು ಸಂಬಳವನ್ನು ನೀಡಿದೆ. ಬಳಿಕ ಹಂತ ಹಂತವಾಗಿ ಸಂಚಾರ ಪ್ರಾರಂಭವಾದ ನಂತರ ಏಳು ತಿಂಗಳ ವೇತನವನ್ನು ಶೇ.75ರಷ್ಟು ಸರಕಾರ ಹಾಗೂ ಶೇ.25ರಷ್ಟು ನಿಗಮ ಸೇರಿಸಿ ವೇತನವನ್ನು ಪಾವತಿ ಮಾಡಿದೆ. ನೌಕರರಿಗೆ ಶೇ.100ರಷ್ಟು ವೇತನವನ್ನು ನವೆಂಬರ್ವರೆಗೆ ನೀಡಲಾಯಿತು" ಎಂದರು.
"ಡಿಸೆಂಬರ್ನಲ್ಲಿ ನೌಕರರಿಗೆ ಅರ್ಧ ಸಂಬಳ ಮಾತ್ರವೇ ನೀಡಲಾಗಿದೆ. ಅದನ್ನು ಸಹ ಮೂರರಿಂದ ನಾಲ್ಕು ದಿನಗಳಲ್ಲಿ ಪೂರ್ತಿಯಾಗಿ ನೀಡಲು ಕ್ರಮತೆಗೆದುಕೊಳ್ಳಲಾಗಿದೆ" ಎಂದು ತಿಳಿಸಿದರು.
ಡಿಸೆಂಬರ್ನಲ್ಲಿ ಸಾರಿಗೆ ಸಿಬ್ಬಂದಿ ನಡೆಸಿದ ಮುಷ್ಕರ ಕರೆಗೆ ಬೆಂಬಲ ನೀಡದ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಸಾರಿಗೆ ಸಂಸ್ಥೆಗಳ ನೌಕರರನ್ನು ಶ್ಲಾಘಿಸಿದ ಅವರು, "ನೌಕರರ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿವುದು ಎಂದು ಸರ್ಕಾರ ನೌಕರರಿಗೆ ಭರವಸೆ ನೀಡಿದೆ" ಎಂದರು.
"ಕೊರೊನಾದ ನಂತರ ಹಿಂದುಳಿದಿರುವ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ. ಸರ್ಕಾರ ಮತ್ತು ಸಚಿವರು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಾರೆ" ಎಂದು ತಿಳಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದಕ್ಕಾಗಿ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ಪಕ್ಷದ ಕಾರ್ಯಕರ್ತರನ್ನು ಶ್ಲಾಘಿಸಿದ ಅವರು, "ಈ ಎರಡು ಜಿಲ್ಲೆಗಳ ಪಕ್ಷದ ಕಾರ್ಯಕರ್ತರ ಬಗ್ಗೆ ನನಗೆ ಯಾವಾಗಲೂ ವಿಶೇಷ ಪ್ರೀತಿ ಇದೆ. ಮಂಗಳೂರು ಮತ್ತು ಉಡುಪಿಯ ಪಕ್ಷದ ಕಾರ್ಯಕರ್ತರು ಪ್ರಾಮಾಣಿಕ ಮತ್ತು ಪಕ್ಷಕ್ಕೆ ಸಮರ್ಪಿತರಾಗಿದ್ದಾರೆ. ಈ ಜಿಲ್ಲೆಯ ಪಕ್ಷದ ಕಾರ್ಯಕರ್ತರಿಗೆ ನನ್ನ ಕಚೇರಿ ಮತ್ತು ಮನೆ ಯಾವಾಗಲೂ ತೆರೆದಿರುತ್ತದೆ" ಎಂದರು.
"ಸಂಜೆ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ" ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.