ನವದೆಹಲಿ, ಜ.30 (DaijiworldNews/PY): "ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಶುಕ್ರವಾರ ನಡೆದ ಐಇಡಿ ಸ್ಪೋಟವು ಉಗ್ರರ ದಾಳಿಯಾಗಿರಬಹುದು" ಎಂದು ಭಾರತದ ಇಸ್ರೇಲ್ ರಾಯಭಾರಿ ರಾನ್ ಮಲ್ಕಾ ಅನುಮಾನ ವ್ಯಕ್ತಪಡಿಸಿದೆ.
ಅಲ್ಲದೇ, "ಘಟನೆಯ ಬಗ್ಗೆ ತನಿಖೆ ಕೈಗೊಂಡಿರುವ ಭಾರತದ ತನಿಖಾ ತಂಡಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ" ಎಂದು ತಿಳಿಸಿದ್ದಾರೆ.
"ತನಿಖೆ ಪ್ರಗತಿಯಲ್ಲಿದೆ. ಘಟನಾ ಸ್ಥಳದಿಂದ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಉಗ್ರರು ಇಸ್ರೇಲ್ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ" ಎಂದು ರಾನ್ ಮಲ್ಕಾ ಅವರು ಸುದ್ದಿಸಂಸ್ಥೆಯೊಂದಕ್ಕೆ ಹೇಳಿದ್ದಾರೆ.
"ಶುಕ್ರವಾರ ದಾಳಿ ನಡೆದ ಸಂದರ್ಭ ಭಾರತ ಹಾಗೂ ಇಸ್ರೇಲ್ ರಾಜತಾಂತ್ರಿಕ ಬಾಂಧವ್ಯ ಸ್ಥಾಪನೆಯ 29ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು, ಅದೇ ದಿನ ಸ್ಪೋಟ ನಡೆದಿದೆ. ಈ ಎಲ್ಲಾ ಅಂಶಗಳ ವಿಚಾರವಾಗಿಯೂ ತನಿಖೆ ಕೈಗೊಳ್ಳಲಾಗಿದೆ" ಎಂದಿದ್ದಾರೆ.
"2012ರಲ್ಲೂ ದೆಹಲಿಯ ಇಸ್ರೇಲ್ ರಾಯಭಾರದ ವಿರುದ್ದ ದಾಳಿ ನಡೆದಿತ್ತು. ಆ ದಾಳಿಗೂ ಹಾಗೂ ಈ ದಾಳಿಗೂ ಸಂಬಂಧವಿದೆಯೇ ಎನ್ನುವುದನ್ನು ತನಿಖೆ ನಡೆಸಲಾಗುತ್ತಿದೆ" ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಜೈಷ್-ಉಲ್-ಹಿಂದ್ ಉಗ್ ಸಂಘಟನೆಯು ಈ ಸ್ಪೋಟದ ಹೊಣೆ ಹೊತ್ತುಕೊಂಡಿದೆ.