ಬೆಂಗಳೂರು, ಜ.30 (DaijiworldNews/PY): "ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಗುಂಡಿಕ್ಕಿ ಹತ್ಯೆಗೈದ ಕೊಲೆಗಡುಕನನ್ನೇ ಆರಾಧಿಸುವ ದೇಶದ್ರೋಹಿಗಳು ಹೆಚ್ಚಾಗುತ್ತಿದ್ದಾರೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಮಹಾತ್ಮ ಗಾಂಧಿಯವರ ಪುಣ್ಯಸ್ಮರಣೆ ಅಂಗವಾಗಿ ನಡೆದ ಹುತಾತ್ಮರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಗಾಂಧೀಜಿ ಅವರು ಯಾರನ್ನು ಶತ್ರುಗಳೆಂದು ಭಾವಿಸಿ ಹೋರಾಟ ಮಾಡಿದರೋ ಅವರು ಗಾಂಧೀಜಿಯವರ ಹತ್ಯೆ ಮಾಡಲಿಲ್ಲ. ಬದಲಾಗಿ, ದೇಶಪ್ರೇಮದ ಪಾಠ ಹೇಳುವ ಸಂಘಟನೆಯ ನಾಯಕ ನಾಥುರಾಮ್ ಗೂಡ್ಸೆ ಎನ್ನುವ ದೇಶದ್ರೋಹಿ ಗಾಂಧೀಜಿಯವರ ಹತ್ಯೆಗೈದಿದ್ದಾರೆ ಎನ್ನುವ ವಿಚಾರವನ್ನು ನಾವು ಎಂದಿಗೂ ಮರೆಯಬಾರದು" ಎಂದು ಹೇಳಿದರು.
"ಗಾಂಧೀಜಿಯವರು ಕಾಂಗ್ರೆಸ್ ಪಕ್ಷದ ನಾಯಕರಾಗಿ ಸ್ವಾತಂತ್ರ್ಯ ಹೋರಾಟ ಮುನ್ನಡೆಸಿದ್ದರೂ ಕೂಡಾ ಅಂತರಂಗದಲ್ಲಿ ಅವರು ಸಮಾಜ ಸುಧಾರಕರು. ಅವರು ಅನುಕಂಪ, ಸತ್ಯ, ಪ್ರೀತಿ, ಸೋದರತೆ ಹಾಗೂ ಅಹಿಂಸೆ ಎನ್ನುವ ಪಂಚ ಸೂತ್ರಗಳ ಮೇಲೆ ತಮ್ಮ ಜೀವನದ ಪಯಣವನ್ನು ನಡೆಸಿದ ಮಹಾನ್ ಸಮಾಜ ಪರಿರ್ತಕ" ಎಂದರು.
"ನಮಗೆ ಗಾಂಧೀಜಿಯವರ ಜೀವನ ಹಾಗೂ ಸಾಧನೆ ಹೇಗೆ ಆದರ್ಶಪ್ರಾಯವೋ ಹಾಗೆಯೇ ಅವರ ಸಾವು ಕೂಡಾ ನಮಗೆ ಪಾಠ. ಗಾಂಧೀಜಿ ಅವರು ಮುಖ್ಯವಾದ ಕೋಮುಸಾಮರಸ್ಯಕ್ಕಾಗಿ ಕೂಡಾ ಹೋರಾಡಿದ್ದಾರೆ. ಈ ಹೋರಾಟಕ್ಕಾಗಿಯೇ ಗಾಂಧೀಜಿಯವರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಆದರೆ, ಯಾವ ಉದ್ದೇಶಕೋಸ್ಕರ ಗಾಂಧೀಜಿಯವರು ಹೋರಾಟ ಮಾಡಿದರೋ ಆ ಕೋಮುಸೌಹಾರ್ದತೆಯ ಸ್ಥಾಪನೆಯ ಕಾರ್ಯ ಇನ್ನೂ ಆಗಿಲ್ಲ" ಎಂದು ಹೇಳಿದರು.
"ಗಾಂಧೀಜಿಯವರ ಒಂದೊಂದೆ ಚಿಂತನೆಗಳನ್ನು ನಮ್ಮ ಕಣ್ಣಮುಂದೆಯೇ ನಾಶಮಾಡುವ ಯತ್ನ ನಡೆಯುತ್ತಿದೆ. ಧರ್ಮ ಧರ್ಮಗಳ ಮಧ್ಯೆ ವೈಮನಸ್ಸು ಸೃಷ್ಟಿಸಿ, ಗಲಭೆ ಉಂಟುಮಾಡಿ, ಆ ಮೂಲಕ ರಾಜಕೀಯ ಲಾಭ ಪಡೆಯುವ ಯೋಜನೆ ನಡೆದಿದೆ" ಎಂದರು.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರುದ್ದ ರೈತರು ನಡೆಸುತ್ತಿರುವ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕೇಂದ್ರ ಸರ್ಕಾರ ರೈತರ ಮೇಲೆ ದೌರ್ಜನ್ಯವೆಸಗುತ್ತಿದೆ. ಇದು ಹಿಂಸೆಯನ್ನು ಸಹ ಅಹಿಂಸೆಯ ಮೂಲಕ ಹೋರಾಡಿ ಗೆದ್ದ ಗಾಂಧೀಜಿಯವರಿಗೆ ತೋರುವ ಅಗೌರವವಾಗಿದೆ" ಎಂದು ಹೇಳಿದರು.
"ರೈತರು ಸುಮಾರು ಎರಡು ತಿಂಗಳುಗಳಿಂದ ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಆದರೂ ಕೂಡಾ ಪ್ರಧಾನಿ ಮೋದಿಯವರು ಏನೂ ಆಗಿಲ್ಲವೆಂಬಂತೆ ಪ್ರಸ್ನನವದನರಾಗಿದ್ದಾರೆ" ಎಂದರು.
ಶುಕ್ರವಾರ ಸಂಸತ್ತಿನ ಜಂಟಿ ಅಧಿವೇಶವನ್ನುದ್ದೇಶಿಸಿ ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಅವರು ಮಾಡಿದ್ದ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ತಮ್ಮ ಭಾಷಣದಲ್ಲಿ ರಾಷ್ಟ್ರಪತಿಯವರು ಕೃಷಿ ಕಾಯ್ದೆಗಳು ರೈತರ ಪರ ಎಂದಿದ್ದಾರೆ. ಆ ಮೂಲಕ ಕೇಂದ್ರವು ರಾಷ್ಟ್ರಪತಿಯವರಿಂದ ಸುಳ್ಳು ಹೇಳಿಸಿದೆ" ಎಂದು ಲೇವಡಿ ಮಾಡಿದರು.