ವಾಷಿಂಗ್ಟನ್, ಜ.30 (DaijiworldNews/PY): ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕೆನ್ ಅವರು ದೂರವಾಣಿ ಕರೆ ಮಾಡಿ ಚರ್ಚೆ ನಡೆಸಿದ್ದಾರೆ.
"ಉಭಯ ನಾಯಕರು ಕೊರೊನಾ ಲಸಿಕೆ ಬಗ್ಗೆ ಪರಸ್ಪರ ಸಹಕಾರ, ಪ್ರದೇಶಿಕ ಅಭಿವೃದ್ದಿ ಸೇರಿದಂತೆ ದ್ವಿಪಕ್ಷೀಯ ಒಪ್ಪಂದದ ಬಗ್ಗೆ ಚರ್ಚೆ ನಡೆಸಿದ್ದಾರೆ" ಎಂದು ಸಚಿವಾಲಯದ ವಕ್ತಾರ ನೆಡ್ ಪ್ರೈಸ್ ತಿಳಿಸಿದ್ದಾರೆ.
"ಬ್ಲಿಂಕನ್ ಅವರು ಇತ್ತೀಷೆಗಷ್ಟೆ ಅಧಿಕಾರ ಸ್ವೀಕರಿಸಿದ್ದು, ಇದು ಜೈಶಂಕರ್ ಅವರೊಂದಿಗೆ ನಡೆಸಿದ ಮೊದಲ ದೂರವಾಣಿ ಮಾತುಕತೆಯಾಗಿದೆ. ಬ್ಲಿಂಕನ್ ಅವರು ಅಮೇರಿಕಾದ ಪಾಲುದಾರರಾಗಿ ಭಾರತದ ಪಾತ್ರವನ್ನು ಚೆನ್ನಾಗಿ ಅರ್ಥ್ಯೆಸಿಕೊಂಡಿದ್ದಾರೆ. ಈ ಸಂದರ್ಭ ಅವರು ಪ್ರಾದೇಶಿಕ ಸಹಕಾರ ಬಗ್ಗೆಯೂ ಚರ್ಚೆ ನಡೆಸಿದ್ದಾರೆ" ಎಂದು ಹೇಳಿದ್ದಾರೆ.
"ಜಾಗತಿಕ ಬೆಳವಣಿಗೆಯ ಬಗ್ಗೆ ಪರಸ್ಪರ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುವ ಸಲುವಾಗಿ ಹಾಗೂ ಶೀಘ್ರದಲ್ಲೇ ಭೇಟಿಯಾಗಿ ಚರ್ಚೆ ನಡೆಸಲು ಉಭಯ ನಾಯಕರು ಸಮ್ಮತಿಸಿದ್ದಾರೆ" ಎಂದು ತಿಳಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ ನಂತರ ಬ್ಲಿಂಕನ್ ಅವರು, ಆಸ್ಟ್ರೇಲಿಯಾ, ಬ್ರಿಟನ್, ಜರ್ಮನಿ, ಫ್ರಾನ್ಸ್ ಸೇರಿದಂತೆ ದಕ್ಷಿಣ ಆಫ್ರಿಕಾ, ಕೆನಡಾ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೊ, ಇಸ್ರೇಲ್ ದೇಶಗಳ ವಿದೇಶಾಂಗ ವ್ಯವಹಾರಗಳ ಸಚಿವರೊಂದಿಗೆ ದೂರವಾಣಿ ಮುಖೇನ ಮಾತುಕತೆ ನಡೆಸಿದ್ದಾರೆ.