ಬೆಂಗಳೂರು,ಜ.30 (DaijiworldNews/HR): "ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಈ ಲಸಿಕೆಗಳನ್ನು ಸಾರ್ವಜನಿಕರು ಯಾವುದೇ ಹಿಂಜರಿಕೆ ಇಲ್ಲದೆ ತೆಗೆದುಕೊಳ್ಳಬಹುದು ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಕೊರೊನಾ ಲಸಿಕೆಯ ಬಗ್ಗೆ ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೆ, ಕೇವಲ ಸರ್ಕಾರದ ಅಧಿಕೃತ ಮಾಹಿತಿಯನ್ನು ಮಾತ್ರ ಪರಿಗಣಿಸಬೇಕು. ಹಾಗಾಗಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಈ ಲಸಿಕೆಗಳನ್ನು ಸಾರ್ವಜನಿಕರು ಯಾವುದೇ ಹಿಂಜರಿಕೆ ಇಲ್ಲದೆ ತೆಗೆದುಕೊಳ್ಳಬಹುದು" ಎಂದರು.
ಇನ್ನು "ಕೊರೊನಾ ಲಸಿಕೆಯ ಮೊದಲನೇ ಡೋಸ್ ಪಡೆದ 28 ದಿನಗಳ ನಂತರ ಎರಡನೇ ಡೋಸ್ ಪಡೆಯಬೇಕಿದ್ದು, ಎರಡನೇ ಡೋಸ್ ಪಡೆದ 14-15 ದಿನಗಳ ನಂತರ, ಅಂದರೆ, ಮೊದಲನೇ ಡೋಸ್ ಪಡೆದ ಸುಮಾರು 45 ದಿನಗಳ ನಂತರವಷ್ಟೇ ರೋಗ ನಿರೋಧಕ ಶಕ್ತಿ ಬರಲಿದೆ. ಈ ನಡುವೆ ಲಸಿಕೆ ಪಡೆದ ವ್ಯಕ್ತಿ ವೈರಾಣುವಿನ ಸಂಪರ್ಕಕ್ಕೆ ಬಂದಿದ್ದರೆ ಸೋಂಕು ತಗುಲುವ ಸಾಧ್ಯತೆ ಇರುತ್ತದೆ" ಎಂದು ಹೇಳಿದ್ದಾರೆ.