ಬೆಂಗಳೂರು, ಜ.30 (DaijiworldNews/PY): ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ನಡೆದ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು ತೋರಿಸುವ ಆಡಿಯೋ, ವಿಡಿಯೋ ಅಥವ ಇತರೆ ಧ್ವನಿಮುದ್ರಣಗಳನ್ನು ನೀಡುವಂತೆ ಸರ್ಕಾರ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
"ಈ ಘಟನೆಯ ಸಂಬಂಧ ರಾಜ್ಯ ಸರ್ಕಾರ, ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಭೆ ಮಾಡುವ ಸಂದರ್ಭ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ನಡೆದ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು ತೋರಿಸುವ ಆಡಿಯೋ, ವಿಡಿಯೋ ಅಥವ ಇತರೆ ಧ್ವನಿಮುದ್ರಣಗಳನ್ನು ನೀಡುವಂತೆ ಜ.27ರಂದು ಸಾರ್ವಜನಿಕ ಅಧಿಸೂಚನೆಯನ್ನು ಹೊರಡಿಸಲಾಗಿದೆ" ಎಂದು ತಿಳಿಸಿದೆ.
"ಘಟನೆಯ ಸಂದರ್ಭ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎನ್ನುವ ಯಾವುದೇ ರೀತಿಯಾದ ಸಾಕ್ಷ್ಯಾಧಾರಗಳಿದ್ದಲ್ಲಿ ಅಧಿಕಾರಿಗಳಿಗೆ ನೀಡಹುದು. ಫೆ.28ರವರೆಗೆ ಶನಿವಾರ ಒಂದು ದಿನವನ್ನು ಬಿಟ್ಟು ವಾರದ ಉಳಿದೆಲ್ಲಾ ದಿನಗಳಲ್ಲಿ ಬೆಳಿಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ಜನರು ಸಾಕ್ಷ್ಯಾಧಾರಗಳನ್ನು ನೀಡಬಹುದಾಗಿದೆ. ಸಾಕ್ಷ್ಯಾಧಾರದೊಂದಿಗೆ ಜನರು ಬರವಣಿಗೆಯ ಮುಖೇನ ತಮ್ಮ ಹೆಸರು, ವಿಳಾಸ ಸೇರಿದಂತೆ ಫೋನ್ ನಂಬರ್, ಇ-ಮೇಲ್ ಐಡಿ ಹಾಗೂ ಇತರ ಮಾಹಿತಿಗಳನ್ನು ಕೂಡ ಸಲ್ಲಿಸಬೇಕು" ಎಂದು ಹೇಳಲಾಗಿದೆ ಎಂದು ನ್ಯಾಯಾಲಯಕ್ಕೆ ಸರ್ಕಾರ ಮಾಹಿತಿ ನೀಡಿದೆ.