ಚಾಮರಾಜನಗರ, ಜ.30 (DaijiworldNews/MB) : ಕೊರೊನಾ ಲಸಿಕೆ ಪಡೆದುಕೊಂಡಿದ್ದ ನಾಲ್ವರು ವೈದ್ಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಏಳು ವೈದ್ಯರಿಗೆ ಕೊರೊನಾ ಪಾಸಿಟಿವ್ ಆಗಿದ್ದು ಈ ಪೈಕಿ ನಾಲ್ವರು ಕೊರೊನಾ ಲಸಿಕೆ ಪಡೆದವರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರಸ್ತುತ ಏಳು ವೈದ್ಯರು ಕೂಡಾ ಚಿಕಿತ್ಸೆ ಪಡೆಯುತ್ತಿದ್ದು ಯಾರಿಗೂ ಅಧಿಕ ಲಕ್ಷಣಗಳು ಇಲ್ಲ. ಈ ಪೈಕಿ ಓರ್ವ ವೈದ್ಯರು ಮಾತ್ರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಎಲ್ಲರೂ ಮನೆಯಲ್ಲಿಯೇ ಚಿಕಿತ್ಸೆಗೆ ಒಳಪಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಚಾಮರಾಜನಗರ ಆರ್ ಸಿ ಎಚ್ ಓ ವಿಶ್ವೇಶ್ವರಯ್ಯ, ''ನಾವು ಈಗ ಕೊರೊನಾ ಲಸಿಕೆ ಪಡೆದಿದ್ದು, ಎರಡನೇ ಡೋಸ್ ಲಸಿಕೆ ಪಡೆದ ಬಳಿಕವೇ ಪರಿಣಾಮ ಉಂಟಾಗುತ್ತದೆ. ನಮಗೆ ಕೊರೊನಾ ಬರಲಾರದು ಎಂದು ನಾವು ಆರಾಮಾವಾಗಿ ಇರುವಂತಿಲ್ಲ. ಈ ವೈದರಲ್ಲಿ ಕೊರೊನಾದ ಸಣ್ಣ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಪರೀಕ್ಷೆಗೆ ಒಳಪಡಿಸಿದ್ದು ಪ್ರಸ್ತುತ ಪಾಸಿಟಿವ್ ಆಗಿದೆ'' ಎಂದು ಹೇಳಿದ್ದಾರೆ.