ಚೆನ್ನೈ, ಜ.30 (DaijiworldNews/HR): ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಜಯಲಲಿತಾ ಮತ್ತು ಎಂ.ಜಿ. ರಾಮಚಂದ್ರನ್ ಅವರ ದೇಗುಲಗಳು ಮಧುರೈನಲ್ಲಿ ನಿರ್ಮಾಣವಾಗಿದ್ದು, ಶನಿವಾರ ಮುಖ್ಯಮಂತ್ರಿ ಎ. ಪಳನಿಸ್ವಾಮಿ ಉದ್ಘಾಟಿಸಲಿದ್ದಾರೆ.
ಜಯಲಲಿತಾ ಅವರ ದೇಗುಲ ನಿರ್ಮಾಣ ಹೊಣೆಯನ್ನು ತಮ್ಮನ್ನು ಮೊದಲ ಬಾರಿಗೆ ಕ್ಯಾಬಿನೆಟ್ ಗೆ ಸೇರಿಸಿಕೊಂಡಿದ್ದ ಕಂದಾಯ ಸಚಿವ ಉದಯ್ ಕುಮಾರ್ ಹೊತ್ತಿದ್ದು, ಮಧುರೈನ ಕಲ್ಲುಪಟ್ಟಿ ಪ್ರದೇಶದ ಒಂದೂವರೆ ಎಕರೆ ಜಾಗದಲ್ಲಿ ದೇಗುಲ ನಿರ್ಮಾಣವಾಗಿದ್ದು, ಜಯಲಲಿತಾ ಮತ್ತು ಎಂ.ಜಿ. ರಾಮಚಂದ್ರನ್ ಅವರ ಕಂಚಿನ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ.
ಇನ್ನು ಜಯಲಲಿತಾನನ್ನು ನಾವು ದೇವತೆ ಎಂದು ಕರೆಯುತ್ತೇವೆ, ಇಲ್ಲಿ ನಮ್ಮ ಅಮ್ಮನನ್ನು ಪೂಜಿಸಲು ಬರುವ ಜನರಿಗೆ ಸಾಕಷ್ಟು ಸ್ಥಳಾವಕಾಶ ಇದೆ ಎಂದು ಸಚಿವ ಉದಯ್ ಕುಮಾರ್ ಹೇಳಿದ್ದಾರೆ.
ಚೆನ್ನೈನ ಪೋಯಸ್ ಗಾರ್ಡನ್ ಪ್ರದೇಶದ ನಿವಾಸವನ್ನು ಸುಮಾರು 79 ಕೋಟಿ ವೆಚ್ಚದಲ್ಲಿ ಜಯಲಲಿತಾ ಸ್ಮಾರಕವಾಗಿ ಪರಿವರ್ತಿಸಲಾಗಿದ್ದು, ಇದೇ ವಾರದ ಆರಂಭದಲ್ಲಿ ಸಿಎಂ ಪಳನಿಸ್ವಾಮಿ ಉದ್ಘಾಟನೆ ಮಾಡಿದ್ದರು.