ಶ್ರೀನಗರ, ಜ.30 (DaijiworldNews/MB) : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದಿದ್ದ ಇಬ್ಬರು ಉಗ್ರರು ಸೇನಾಧಿಕಾರಿಗಳ ಮುಂದೆ ಶಸ್ತ್ರಾಸ್ತ್ರ ಒಪ್ಪಿಸಿ ಶರಣಾಗಿದ್ದಾರೆ ಎಂದು ವರದಿಯಾಗಿದೆ.
ಶರಣಾದ ಉಗ್ರರನ್ನು ಅಕೀಲ್ ಅಹ್ಮದ್ ಲೋನ್ ಮತ್ತು ರೂಫ್ ಉಲ್ ಇಸ್ಲಾಂ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು, ಜಿಲ್ಲೆಯ ಕಾಕಪೋರಾ ಪ್ರದೇಶದ ಲೆಲ್ಹಾರ್ ಪ್ರದೇಶವನ್ನು ಉಗ್ರರು ಅಡಗಿರುವ ಮಾಹಿತಿ ದೊರೆತ ಹಿನ್ನೆಲೆ ಶೋಧ ಕಾರ್ಯ ನಡೆಸಲಾಗಿದ್ದು ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದರು. ಈ ವೇಳೆ ಕಾರ್ಯಾಚರಣೆ ಎನ್ಕೌಂಟರ್ಗೆ ತಿರುಗಿದ್ದು ರಾತ್ರಿಯಿಡೀ ಗುಂಡಿನ ಚಕಮಕಿಯ ಬಳಿಕ, ಇಬ್ಬರು ಉಗ್ರರು ತಮ್ಮ ಎರಡು ಎಕೆ ರೈಫಲ್ಗಳ್ನು ಭದ್ರತಾ ಪಡೆಗೆ ಒಪ್ಪಿಸಿ ಶರಣಾದರು ಎಂದು ತಿಳಿಸಿದ್ದಾರೆ.
ಶರಣಾದ ಅಕೀಲ್ ಅಹ್ಮದ್ ಲೋನ್ ಬಲಗಾಲಿನಲ್ಲಿ ಗಾಯವಾಗಿದ್ದು ಚಿಕಿತ್ಸೆಗಾಗಿ ಪೊಲೀಸರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳಿದರು.
ಇನ್ನು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಥ್ರಾಲ್ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಹಿಝ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಹತರಾದ ಉಗ್ರರನ್ನು ನಯೀಬಾಗ್ನ ವಾರಿಸ್ ಹಸನ್, ಮೊಂಗ್ಹಾಮಾದ ಆರಿಫ್ ಬಶೀರ್ ಮತ್ತು ಅವಂತಿಪುರದ ಅತ್ಹೀಶಮುಲ್ ಹಖ್ ಎಂದು ಗುರುತಿಸಲಾಗಿದೆ.