ಕಾಸರಗೋಡು, ಜ.30 (DaijiworldNews/MB) : ಕೊರೊನಾ ಸೋಂಕು ದೇಶಕ್ಕೆ ಕಾಲಿಟ್ಟು ಇಂದಿಗೆ ಒಂದು ವರ್ಷವಾಗುತ್ತಿದ್ದು, ಕೇರಳದ ತೃಶ್ಯೂರಿನಲ್ಲಿ ದೇಶದ ಮೊದಲ ಪ್ರಕರಣ ಪತ್ತೆಯಾಗಿತ್ತು. ಚೀನಾದಿಂದ ಬಂದಿದ್ದ ವಿದ್ಯಾರ್ಥಿಯಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ದೇಶದ ಮೂರನೇ ಪ್ರಕರಣ ಫೆಬ್ರವರಿ 3 ರಂದು ಕಾಸರಗೋಡಿನಲ್ಲಿ ಪತ್ತೆಯಾಗಿತ್ತು.
ಬಳಿಕದ ದಿನಗಳಲ್ಲಿ ಸೋಂಕು ಮಹಾಮಾರಿಯಾಗಿ ರೂಪು ಪಡೆದು ಡಿಸಂಬರ್ ಮಧ್ಯದ ವೇಳೆಗೆ ಕೇರಳದಲ್ಲಿ ನಿಯಂತ್ರಣಕ್ಕೆ ಬಂದಿತ್ತು. ಆದರೆ ಪ್ರಕರಣ ಪತ್ತೆಯಾಗಿ ಒಂದು ವರ್ಷವಾಗುತ್ತಿರುವ ಈ ಸಂದರ್ಭದಲ್ಲಿ ಕೇರಳದಲ್ಲಿ ಸೋಂಕು ಮತ್ತೆಯಾಗತೊಡಗಿದೆ. ದಿನಂಪ್ರತಿ 5 ರಿಂದ 6 ಸಾವಿರದಷ್ಟು ಸೋಂಕು ಪತ್ತೆಯಾಗುತ್ತಿದೆ. ಶುಕ್ರವಾರ 6268 ಪ್ರಕರಣಗಳು ಕೇರಳದಲ್ಲಿ ದೃಢಪಟ್ಟಿವೆ. ಕಾಸರಗೋಡು ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ 300 ಕ್ಕೂ ಅಧಿಕ ಪ್ರಕರಣಗಳು ದಿನಂಪ್ರತಿ ದಾಖಲಾಗುತ್ತಿದೆ.
ಫೆಬ್ರವರಿ 10 ರ ತನಕ ಕಟ್ಟುನಿಟ್ಟಿನ ನಿಯಂತ್ರಣ
ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹಲವು ನಿರ್ಬಂಧಗಳನ್ನು ಜಾರಿಗೆ ತಂದಿದೆ. ಫೆಬ್ರವರಿ 10 ರ ತನಕ ಈ ನಿರ್ಬಂಧ ಜಾರಿಯಲ್ಲಿರಲಿದೆ. ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ ಗೊಳಿಸಲಾಗಿದೆ. ಯಾವುದೇ ಕಾರ್ಯಕ್ರಮಕ್ಕೆ 100 ಕ್ಕಿಂತ ಅಧಿಕ ಮಂದಿ ಸೇರುವಂತಿಲ್ಲ. ಕಾರ್ಯಕ್ರಮಕ್ಕೆ ಪೂರ್ವಾನುಮತಿ ಅಗತ್ಯ. ರಾತ್ರಿ 10 ಗಂಟೆ ಬಳಿಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಬೇಕು. ಸಾರ್ವಜನಿಕರು ಅಗತ್ಯಕ್ಕೆ ಮಾತ್ರ ಪೇಟೆಗಳಿಗೆ ತಲಪುವಂತೆ ಆದೇಶ ನೀಡಲಾಗಿದೆ. ಆದೇಶ ಉಲ್ಲಂಘನೆಯಾಗದಂತೆ ಪೊಲೀಸರು ನಿಗಾ ಇರಿಸಿದ್ದಾರೆ. ಸೋಂಕಿತರ ಪ್ರಮಾಣ ಮತ್ತೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.