ನವದೆಹಲಿ,ಜ.30 (DaijiworldNews/HR): "ದೇಶದಾದ್ಯಂತ ಕಳೆದ 13 ದಿನಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ಆ ಮೂಲಕ ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಲಸಿಕೆ ನೀಡಿದ ದೇಶವಾಗಿದೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
"ಮೂವತ್ತು ಲಕ್ಷ ಮಂದಿಗೆ ಕೊರೊನಾ ಲಸಿಕೆ ನೀಡಲು ಅಮೇರಿಕಾವು 18 ದಿನಗಳು, ಇಸ್ರೇಲ್ 33 ದಿನಗಳು ಮತ್ತು ಬ್ರಿಟನ್ ದೇಶವು 36 ದಿನಗಳನ್ನು ತೆಗೆದುಕೊಂಡಿವೆ" ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ.
ಇನ್ನು ಕರ್ನಾಟಕದಲ್ಲಿ ಕೇವಲ 14 ದಿನಗಳಲ್ಲಿ 3,02,217 ಆರೋಗ್ಯ ಕಾರ್ಯಕರ್ತರು ಕೊರೊನಾ ಲಸಿಕೆ ಪಡೆದುಕೊಂಡಿದ್ದು, ಇದರಿಂದಾಗಿ ಲಸಿಕೆ ವಿತರಣೆಯಲ್ಲಿ ಕರ್ನಾಟಕವು ದೇಶದಲ್ಲಿಯೇ ಮೂರು ಲಕ್ಷದ ಗಡಿ ದಾಟಿದ ಮೊದಲ ರಾಜ್ಯ ಎನ್ನಲಾಗಿದೆ.