ನವದೆಹಲಿ, ಜ.30 (DaijiworldNews/PY): ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 73ನೇ ಪುಣ್ಯತಿಥಿ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸ್ಮರಿಸಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, "ರಾಷ್ಟ್ರ ಪಿತಾಮಹ ಮಹಾತ್ಮ ಗಾಂಧಿ ಅವರಿಗೆ ನನ್ನ ವಿನಮ್ರ ಗೌರವ. ಅವರ ಶಾಂತಿ, ಅಹಿಂಸೆ, ಸರಳತೆ, ಸಾಧನೆಗೆ ಹಾಗೂ ನಮ್ರತೆಯ ಆದರ್ಶಗಳಿಗೆ ನಾವು ಬದ್ಧರಾಗಿರಬೇಕು. ಅವರ ಸತ್ಯ ಹಾಗೂ ಪ್ರೀತಿಯ ಮಾರ್ಗವನ್ನು ಅನುಸರಿಸಲು ನಾವು ನಿರ್ಧರಿಸೋಣ" ಎಂದಿದ್ದಾರೆ.
"ಬಾಪು ಅವರ ಪುಣ್ಯತಿಥಿಯಂದು ಅವರಿಗೆ ಗೌರವ ನಮನಗಳನ್ನು ಸಲ್ಲಿಸುತ್ತೇನೆ. ಅವರ ಆದರ್ಶಗಳು ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದೆ. ಹುತಾತ್ಮರ ದಿನದಂದು ಭಾರತದ ಸ್ವಾತಂತ್ರ್ಯ ಮತ್ತು ಪ್ರತಿಯೊಬ್ಬ ಭಾರತೀಯರ ಯೋಗಕ್ಷೇಮಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಎಲ್ಲ ಮಹಾನ್ ಮಹಿಳೆಯರು ಮತ್ತು ಪುರುಷರ ವೀರರ ತ್ಯಾಗವನ್ನು ನಾವು ಸ್ಮರಿಸೋಣ" ಎಂದು ಹೇಳಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದು, "ಸತ್ಯ, ಅಹಿಂಸೆಯ ಆದರ್ಶಗಳ ಸಾಕಾರ ಮೂರ್ತಿಯಂತಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಪುಣ್ಯತಿಥಿಯಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು. ನಮ್ಮನ್ನು ಸದಾ ಎಚ್ಚರಿಸುವ ಗಾಂಧೀಜಿಯವರ ಜೀವನ, ಅವರ ನಡೆ ಮತ್ತು ನುಡಿಗಳ ಬೆಳಕಿನಲ್ಲಿ ಸಮೃದ್ಧ, ಸಶಕ್ತ ಭಾರತ ನಿರ್ಮಾಣದ ಹಾದಿಯಲ್ಲಿ ಮುನ್ನಡೆಯೋಣ" ಎಂದಿದ್ದಾರೆ.
"ಸತ್ಯಾಗ್ರಹದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಅತ್ಯಂತ ಮುಖ್ಯ ಪಾತ್ರ ವಹಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪುಣ್ಯ ತಿಥಿಯಂದು ಆ ಮಹಾನ್ ನಾಯಕನಿಗೆ ಕೋಟಿ ಕೋಟಿ ನಮನಗಳು. ಬಾಪೂಜಿ ಅವರ ಶ್ರಮ ಜೀವನ, ಗ್ರಾಮ ಸ್ವರಾಜ್ಯ, ಸ್ವಚ್ಛತೆ, ರಾಮ ರಾಜ್ಯದ ಪರಿಕಲ್ಪನೆಗಳು ಸಾರ್ವಕಾಲಿಕ ತತ್ವಾದರ್ಶಗಳಾಗಿದ್ದು ಅವರ ಹಾದಿಯಲ್ಲಿ ಮುನ್ನಡೆಯೋಣ" ಎಂದು ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.