ಬೆಂಗಳೂರು, ಜ.30 (DaijiworldNews/PY): ಆರ್ಎಸ್ಎಸ್ ಕಾರ್ಯಕರ್ತ ಎಂದು ನಂಬಿಸಿ ಪ್ರತಿಷ್ಠಿತ ಹುದ್ದೆಗಳನ್ನು ನೀಡುವುದಾಗಿ ವಂಚಿಸಿರುವ ಯುವರಾಜ್ ಸ್ವಾಮಿಯ ಮತ್ತೊಂದು ವಂಚನೆ ಪ್ರಕರಣ ಬಯಲಾಗಿದ್ದು, ಯುವರಾಜ್ ವಿರುದ್ದ ಎಫ್ಐಆರ್ ದಾಖಲಾಗಿದೆ.
ಕೇಂದ್ರ ರೇಷ್ಮೆ ಮಂಡಳಿಯಲ್ಲಿ ಅಧ್ಯಕ್ಷಗಿರಿ ಕೊಡಿಸುವುದಾಗಿ ನಂಬಿಸಿ ಆಂಧ್ರದ ಕಾಳಹಸ್ತಿಯ ಬಿಜೆಪಿ ಮುಖಂಡ ಕೋಲಾ ಆನಂದ್ ಎಂಬುವವರಿಂದ ಒಂದೂವರೆ ಕೋಟಿ.ರೂ. ಪಡೆದಿರುವ ವಿಚಾರ ಬಯಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಫೆ.1ರವರೆಗೆ ಆರೋಪಿ ಯುವರಾಜನನ್ನು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ಮುಂದುವರಿಸಿದ್ದಾರೆ.
ಆಂಧ್ರದ ಶ್ರೀಕಾಳಹಸ್ತಿ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭ ಯುವರಾಜ ಅಲ್ಲಿ ಕೋಲಾ ಆನಂದ್ ಎನ್ನುವವರನ್ನು ಪರಿಚಯ ಮಾಡಿಕೊಂಡಿದ್ದು, ತಾನು ಆರ್ಎಸ್ಎಸ್ನ ಕಾರ್ಯಕರ್ತ ಎಂದು ಆನಂದ್ ಅವರನ್ನು ನಂಬಿಸಿದ್ದ. ಅಲ್ಲದೇ, ಕೇಂದ್ರ ಹಾಗೂ ರಾಜ್ಯದ ಬಿಜೆಪಿ ನಾಯಕರೊಂದಿಗಿರುವ ಫೋಟೋಗಳನ್ನು ತೋರಿಸಿ ನಾನು ಪ್ರಭಾವಿ ವ್ಯಕ್ತಿ ಎಂದಿದ್ದರು. ನೀವು ಹಣ ನೀಡಿ ಬೆಂಗಳೂರಿಗೆ ಬಂದಲ್ಲಿ ಕೇಂದ್ರ ರೇಷ್ಮೆ ಮಂಡಳಿಯಲ್ಲಿ ಅಧ್ಯಕ್ಷಗಿರಿ ಕೊಡಿಸುವುದಾಗಿ ತಿಳಿಸಿದ್ದ.
ಯುವರಾಜನ ಮಾತನ್ನು ನಂಬಿದ ಆನಂದ್ ಬೆಂಗಳೂರಿಗೆ ತೆರಳಿ ಅಲ್ಲಿ ಯುವರಾಜ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಯುವರಾಜ ಆನಂದ್ ಅವರಿಂದ 1.5 ಕೋಟಿ.ರೂ. ಪಡೆದುಕೊಂಡಿದ್ದರು. ಬಳಿಕ ಆನಂದ್ ಅವರಿಗೆ ಯಾವುದೇ ಹುದ್ದೆ ನೀಡದೇ ಹಣವನ್ನು ವಾಪಾಸ್ ನೀಡದೇ ವಂಚಿಸಿದ್ದಾನೆ. ಕೋಲಾ ಆನಂದ್ ಹಣ ವಾಪಾಸ್ ಕೇಳಿದ್ದ ಸಂದರ್ಭ ಕೊಲೆ ಬೆದರಿಗೆ ಹಾಗೂ ಐಟಿ, ಇಡಿಗೆ ದೂರು ನೀಡುತ್ತೇನೆ ಎಂದು ಬೆದರಿಕೆ ಹಾಕಿದ್ದ.
ಯುವರಾಜನನ್ನು ಸಿಸಿಬಿ ಪೊಲೀಸರು ವಂಚನೆ ಪ್ರಕರಣದಲ್ಲಿ ಬಂಧಿಸಿರುವ ವಿಚಾರ ತಿಳಿದ ಕೋಲಾ ಆನಂದ್ ಹೈಗ್ರೌಂಡ್ಸ್ ಠಾಣೆಯಲ್ಲಿ ಯುವರಾಜ್ ವಿರುದ್ದ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದಿ ಹಿರಿಯ ಅಧಿಕಾರಿಯೋರ್ವರು ಹೇಳಿದ್ದಾರೆ.