ನವದೆಹಲಿ, ಜ.30 (DaijiworldNews/PY): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಮಹಾತ್ಮ ಗಾಂಧಿ ಪುಣ್ಮತಿಥಿಯಾದ ಸದ್ಭಾವನಾ ದಿನವನ್ನು ಆಚರಿಸುವ ಮುಖೇನ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ.
"ದೆಹಲಿಯ ಸಿಂಘಿ ಗಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೈತರು, ಕೃಷಿ ಕಾಯ್ದೆಗಳ ವಿರುದ್ದ ನಡೆಯುತ್ತಿರುವ ನಮ್ಮ ಹೋರಾಟವನ್ನು ತಡೆಯಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ" ಎಂದು ಹೇಳಿದ್ದಾರೆ.
"ರೈತರನ್ನು ನಾಶಮಾಡಲು ಆಡಳಿತರೂಢ ಬಿಜೆಪಿ ನಡೆಸಿದ ಷಡ್ಯಂತ್ರ ಬಯಲಾಗಿದೆ" ಎಂದು ಭಾರತೀಯ ಕಿಸಾನ್ ಯೂನಿಯನ್ನ ಜಗ್ಜೀತ್ ಸಿಂಗ್ ದಲ್ಲೇವಾಲ್ ಆರೋಪಿಸಿದ್ಧಾರೆ.
"ರಾಷ್ಟ್ರಧ್ವಜವನ್ನು ಗೌರವಿಸುವ ಬಗ್ಗೆ ನಮಗೆ ಈ ಜನರಿಂದ ಉಪನ್ಯಾಸ ಬೇಕಾಗಿಲ್ಲ. ಇಲ್ಲಿ ಕುಳಿತಿರುವ ಹೆಚ್ಚಿನ ರೈತರ ಮಕ್ಕಳು ಗಡಿಯಲ್ಲಿ ಹೋರಾಟ ಮಾಡುತ್ತಿದ್ದಾರೆ" ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಯುಧ್ವೀರ್ ಸಿಂಗ್ ತಿಳಿಸಿದ್ದಾರೆ.
"ರೈತರ ಹೋರಾಟವನ್ನು ಹತ್ತಿಕ್ಕುವ ಸರ್ಕಾರದ ಕ್ರಮ, ಗಾಜಿಪುರ ಗಡಿಯನ್ನು ಖಾಲಿ ಮಾಡುವಂತೆ ಒತ್ತಾಯಿಸುವ ಮುಖೇನ ಹೋರಾಟ ಇನ್ನಷ್ಟು ಪ್ರವರ್ಧಮಾನಕ್ಕೆ ಬಂದಿದೆ" ಎಂದಿದ್ದಾರೆ.
ಜ.26ರಂದು ಗಣರಾಜ್ಯೋತ್ಸವ ದಿನದಂದು ಟ್ಯ್ರಾಕ್ಟರ್ ರ್ಯಾಲಿಯಲ್ಲಿ ಸಾವಿರಾರು ಪ್ರತಿಭಟನಾನಿರತ ರೈತರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆಸಿದ್ದರು. ಈ ಪೈಕಿ ಹಲವಾರು ಮಂದಿ ರೈತರು ಟ್ಯ್ರಾಕ್ಟರ್ಗಳ ಮುಖೇನ ಕೆಂಪುಕೋಟೆಗೆ ನುಗ್ಗಿ ದಾಂಧಲೆ ನಡೆಸಿದ್ದು, ರೈತನೋರ್ವ ಕೆಂಪುಕೋಟೆಯ ಮುಂಭಾಗದಲ್ಲಿರುವ ಧ್ವಜಸ್ತಂಭಕ್ಕೆ ಹತ್ತಿ ಅಲ್ಲಿ ಭಾರತೀಯ ಕಿಸಾನ್ ಯೂನಿಯನ್ನ ಧ್ವಜವನ್ನು ಹಾರಿಸಿದ್ದನು.