ನವದೆಹಲಿ, ಜ.30 (DaijiworldNews/PY): ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಹಾಗೂ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಸ್ಪೋಟ ಸಂಭವಿಸಿದ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಅವರ ಪಶ್ಚಿಮ ಬಂಗಾಳ ಭೇಟಿ ಮುಂದೂಡಿಕೆಯಾಗಿದೆ.
ಶನಿವಾರ ಹಾಗೂ ಭಾನುವಾರ ಪಶ್ಚಿಮಬಂಗಾಳದಲ್ಲಿ ಅಮಿತ್ ಶಾ ಅವರು ಎರಡು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುವುದು ನಿಗದಿಯಾಗಿದ್ದು, ಸದ್ಯ ಭೇಟಿಯನ್ನು ಮುಂದೂಡಲಾಗಿದೆ ಎಂದು ಮೂಲಗಳು ಹೇಳಿವೆ. ಇದಕ್ಕೆ ಖಚಿತವಾದ ಕಾರಣ ಏನು ಎಂದು ಸ್ಪಷ್ಟಪಡಿಸಿಲ್ಲ.
ಸಿಂಘು ಗಡಿಯಲ್ಲಿ ಕೃಷಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯರು ಎಂದು ಹೇಳಿಕೊಳ್ಳುವ ಜನರು ಹಾಗೂ ಪ್ರತಿಭಟನಾ ನಿರತ ರೈತರ ಮಧ್ಯೆ ಗಲಾಟೆ ನಡೆದಿದ್ದು, ಕಲ್ಲು ತೂರಾಟ ನಡೆದಿರುವ ಘಟನೆಗಳು ವರದಿಯಾಗಿದ್ದು, ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರಲ್ಲದೆ ಅಶ್ರುವಾಯು ಪ್ರಯೋಗಿಸಿದ್ದಾರೆ.
ಇನ್ನೊಂದೆಡೆ, ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಪೋಟ ಸಂಭವಿಸಿತ್ತು.
ಎಪ್ರಿಲ್-ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆ ಅಮಿತ್ ಶಾ ಅವರು ಪಶ್ಚಿಮಬಂಗಾಳಕ್ಕೆ ಈಗಾಗಲೇ ಹಲವಾರು ಬಾರಿ ಭೇಟಿ ನೀಡಿದ್ದಾರೆ.