ಬೆಂಗಳೂರು, ಜ 29 (DaijiworldNews/SM): ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಹೊರೆಯಾಗುವ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಶುಲ್ಕ ವಸೂಲಾತಿಗೆ ಕಡಿವಾಣ ಹಾಕಿದ್ದ ಸರಕಾರ ಇದೀಗ ಶುಲ್ಕ ನಿಗದಿಗೊಳಿಸಿ ಆದೇಶ ನೀಡಿದೆ.
2019-20ನೇ ಸಾಲಿನಲ್ಲಿ ಶೇ. 70 ರಷ್ಟು ಬೋಧನಾ ಶುಲ್ಕ ಪಡೆಯಲು ಸರಕಾರ ಅನುಮತಿ ನೀಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು, ರಾಜ್ಯದ ಯಾವುದೇ ಮಾದರಿಯ ಪಠ್ಯಕ್ರಮದ ಖಾಸಗಿ ಶಾಲೆಗಳು 2019ನೇ ಸಾಲಿನಲ್ಲಿ ಶೇ. 70 ರಷ್ಟು ಬೋಧನಾ ಶುಲ್ಕ ಮಾತ್ರ ಪಡೆಯಬೇಕು. ಇದನ್ನು ಬಿಟ್ಟು ಇತರೆ ಯಾವುದೇ ಅಭಿವೃದ್ಧಿ ಶುಲ್ಕ ಅಥವಾ ಟ್ರಸ್ಟ್ ಗೆ ಡೊನೇಷನ್ ಪಡೆಯುವಂತಿಲ್ಲ ಎಂದು ಸೂಚಿಸಿದ್ದಾರೆ.
ಈಗ ಸರ್ಕಾರ ನಿಗದಿಪಡಿಸಿರುವ ಶುಲ್ಕವನ್ನು ಎರಡು ಅಥವಾ ಮೂರು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಬೇಕು ಎಂದು ಶಿಕ್ಷಣ ಸಚಿವರು ಆದೇಶ ನೀಡಿದ್ದಾರೆ. ಕೊರೋನಾ ಕಾರಣದಿಂದ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರು ಇಬ್ಬರಿಗೂ ಆರ್ಥಿಕ ಸಂಕಷ್ಟ ಎದುರಾಗಿದೆ. ಕೆಲವು ಶಾಲೆಗಳಲ್ಲಿ ಶಿಕ್ಷಕರಿಗೆ ತಿಂಗಳ ಸಂಬಳ ಪಾವತಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲರ ಹಿತದೃಷ್ಟಿಯಿಂದ ಶೇ 70ರಷ್ಟು ಮಾತ್ರ ಶುಲ್ಕ ಪಡೆಯಲು ಸೂಚಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.