ರಾಂಚಿ,ಜ.29 (DaijiworldNews/HR): ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರು ಡುಮ್ಕಾ ಖಜಾನೆ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜಾರ್ಖಂಡ್ ಹೈಕೋರ್ಟ್ ಫೆಬ್ರುವರಿ 5ಕ್ಕೆ ಮುಂದೂಡಿದೆ.
ಲಾಲು ಪ್ರಸಾದ್ ಯಾದವ್ ಪರವಾಗಿ ಸಲ್ಲಿಸಿರುವ ದಾಖಲೆಗಳು ಇನ್ನೂ ತಮ್ಮ ಕೈಸೇರಿಲ್ಲ. ಹೀಗಾಗಿ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಏನಾದರೂ ಹೇಳಲು ಬಯಸಿದರೆ ಈ ಅವಧಿಯಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬಹುದು ಎಂದು ನ್ಯಾಯಾಧೀಶ ಅಪರೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.
ಇನ್ನು ಬಹುಕೋಟಿ ಮೇವು ಹಗರಣದ ಮೂರು ಪ್ರಕರಣಗಳಲ್ಲಿ ಲಾಲು ಪ್ರಸಾದ್ ಅವರಿಗೆ ಈಗಾಗಲೇ ಜಾಮೀನು ಸಿಕ್ಕಿದ್ದು, ಡುಮ್ಕಾ ಖಜಾನೆ ಪ್ರಕರಣದಲ್ಲೂ ಜಾಮೀನು ಮಂಜೂರಾದರೆ ಅವರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಲಾಲು ಅವರಿಗೆ ಜೈಲಿನಲ್ಲಿದ್ದಾಗ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕಳೆದ ವಾರ ಅವರನ್ನು ರಾಂಚಿಯಿಂದ ನವದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.