ನವದೆಹಲಿ,ಜ.29 (DaijiworldNews/HR): ಸಿಂಘು ಗಡಿಯಲ್ಲಿ ಕೃಷಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯರು ಎಂದು ಹೇಳಿಕೊಳ್ಳುವ ಜನರು ಹಾಗೂ ಪ್ರತಿಭಟನಾ ನಿರತ ರೈತರ ಮಧ್ಯೆ ಗಲಾಟೆ ನಡೆದಿದೆ ಎನ್ನಲಾಗಿದೆ.
ಸಿಂಘು ಗಡಿಯಲ್ಲಿ ಕಲ್ಲು ತೂರಾಟ ನಡೆದಿರುವ ಘಟನೆಗಳು ವರದಿಯಾಗಿದ್ದು, ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರಲ್ಲದೆ ಅಶ್ರುವಾಯು ಪ್ರಯೋಗಿಸಿದ್ದಾರೆ ಎನ್ನಲಾಗಿದೆ.
ಇನ್ನು ಪೊಲೀಸ್ ಬ್ಯಾರಿಕೇಡ್ಗಳನ್ನು ಧ್ವಂಸಗೊಳಿಸಲಾಗಿದ್ದು, ಸ್ಥಳೀಯರೆಂದು ಹೇಳಿಕೊಳ್ಳುತ್ತಿರುವ ಜನರು ರೈತರ ವಿರುದ್ಧ ಘೋಷಣೆಗಳನ್ನು ಕೂಗಿ, ಸ್ಥಳ ಖಾಲಿ ಮಾಡುವಂತೆ ಪ್ರತಿಭಟಿಸಿದ್ದಾರೆ.
ಖಾಲಿಸ್ತಾನ್ ವಿರೋಧಿ ಘೋಷಣೆ, ಭಾರತದ ತ್ರಿವರ್ಣ ಪತಾಕೆಗೆ ಆದ ಅವಮಾನವನ್ನು ದೇಶ ಎಂದಿಗೂ ಸಹಿಸುವುದಿಲ್ಲ ಮುಂತಾದ ಘೋಷಣೆಗಳನ್ನು ಸ್ಥಳೀಯರು ಕೂಗುತ್ತಿದ್ದರು ಎಂದು ವರದಿಯಾಗಿದೆ.
ಇನ್ನು ಗಣರಾಜ್ಯೋತ್ಸವ ದಿನದಂದು ನಡೆಸಲಾದ ಟ್ರ್ಯಾಕ್ಟರ್ ಜಾಥಾದಲ್ಲಿ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ದೆಹಲಿ ಹರಿಯಾಣದ ಸಿಂಘು ಗಡಿಯಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.