ನವದೆಹಲಿ, ಜ.29 (DaijiworldNews/HR): "ಜನವರಿ 26ರಂದು ಗಣರಾಜ್ಯೋತ್ಸವದಂದು ನಡೆದ ರೈತರ ಟ್ರ್ಯಾಕ್ಟರ್ ರ್ಯಾಲಿಯ ವರದಿಗೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತರು, ಸಂಪಾದಕರ ವಿರುದ್ಧ ಎಫ್ಐಆರ್ ದಾಖಲಿಸಿರುವ ಕ್ರಮವನ್ನು ಭಾರತೀಯ ಸಂಪಾದಕರ ಒಕ್ಕೂಟ ಖಂಡಿಸಿದ್ದು, ಇದು ಬೆದರಿಕೆಯೊಡ್ಡುವ ಮತ್ತು ಕಿರುಕುಳ ನೀಡುವ ಉದ್ದೇಶವನ್ನು ಒಳಗೊಂಡಿದೆ" ಎಂದು ಹೇಳಿದೆ.
ಈ ಕುರಿತು ಭಾರತೀಯ ಸಂಪಾದಕರ ಒಕ್ಕೂಟ್ ಹೇಳಿಕೆ ನೀಡಿದ್ದು, "ಕೂಡಲೇ ಎಫ್ಐಆರ್ ಅನ್ನು ರದ್ದುಪಡಿಸಬೇಕು ಹಾಗೂ ನಿರ್ಭೀತ ಪರಿಸರದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು" ಎಂದು ಒತ್ತಾಯಿಸಿದೆ.
ಇನ್ನು "ರ್ಯಾಲಿ ವೇಳೆ ರೈತರೊಬ್ಬರ ಸಾವು ಪ್ರಕರಣದ ವರದಿಗೆ ಸಂಬಂಧಿಸಿ ಪತ್ರಕರ್ತರು ಹಾಗೂ ಅವರು ಪ್ರತಿನಿಧಿಸುವ ಸಂಸ್ಥೆಗಳನ್ನು ಗುರಿಯಾಗಿಸಿ ಕ್ರಮ ಜರುಗಿಸಲಾಗುತ್ತಿದ್ದು, ಘಟನೆ ನಡೆದ ದಿನ ಪೊಲೀಸರು ಸೇರಿದಂತೆ ವಿವಿಧ ಆಯಾಮಗಳಿಂದ ಸುದ್ದಿ ಹೊರಹೊಮ್ಮುತ್ತಿತ್ತು. ಸಹಜವಾಗಿಯೇ ಪತ್ರಕರ್ತರು ಅದನ್ನು ವರದಿ ಮಾಡಿದ್ದಾರೆ" ಎಂದು ತಿಳಿಸಿದೆ.