ನವದೆಹಲಿ, ಜ.29 (DaijiworldNews/PY): ಶುಕ್ರವಾರ ಸಂಸತ್ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಯವರು ಮಾಡಿದ ಭಾಷಣಕ್ಕೆ ಗೈರಾದ ಪ್ರತಿಪಕ್ಷಗಳ ವಿರುದ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದು, "ಇದು ನಿಜಕ್ಕೂ ದುರದೃಷ್ಟಕರ" ಎಂದಿದ್ದಾರೆ.
ಶುಕ್ರವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, "ಇಂದು ನಡೆದ ಬಜೆಟ್ ಅಧಿವೇಶನವು ಅಧ್ಯಕ್ಷರ ಭಾಷಣದೊಂದಿಗೆ ಆರಂಭವಾಯಿತು. ಆದರೆ, ರಾಷ್ಟ್ರಪತಿಯವರ ಭಾಷಣವನ್ನು ಪ್ರತಿಪಕ್ಷಗಳು ಬಹಿಷ್ಕರಿಸಿವೆ. ಇದು ನಿಜಕ್ಕೂ ದುರದೃಷ್ಟಕರ" ಎಂದು ಹೇಳಿದ್ದಾರೆ.
"ರಾಷ್ಟ್ರಪತಿಗಳು ಸಾಂವಿಧಾನಿಕ ಮುಖ್ಯಸ್ಥರು. ಅವರಿಗೆ ಗೌರವ ನೀಡುವುದು ಪ್ರಜಾಪ್ರಭುತ್ವದ ರೂಢಿಯಾಗಿದೆ. ದುರದೃಷ್ಟಕರ ವಿಷಯವೇನೆಂದರೆ, ಈ ದೇಶದಲ್ಲಿ 50 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ರಾಷ್ಟ್ರಪತಿ ಅವರ ಭಾಷಣವನ್ನು ಬಹಿಷ್ಕರಿಸಿದೆ. ಯಾವ ರೀತಿಯಾದ ಸಂಪ್ರದಾಯಕ್ಕೆ ಅವರು ನಾಂದಿ ಹಾಡುತ್ತಿದ್ದಾರೆ" ಎಂದಿದ್ದಾರೆ.
ಕಾಂಗ್ರೆಸ್ ಸೇರಿದಂತೆ ಎನ್ಸಿಪಿ, ಶಿವಸೇನಾ, ಟಿಎಂಸಿ, ಬಿಎಸ್ಪಿ ಸೇರಿ 16 ವಿರೋಧ ಪಕ್ಷಗಳು ಸಂಸತ್ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಅವರು ಮಾಡಲಿರುವ ಭಾಷಣವನ್ನು ಬಹಿಷ್ಕರಿಸಿವೆ.
"ಪ್ರತಿಭಟನಾನಿರತ ರೈತರಿಗೆ ಬೆಂಬಲ ನೀಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಿದ್ದೇವೆ" ಎಂದು ವಿರೋಧ ಪಕ್ಷಗಳು ತಿಳಿಸಿದ್ದವು.