ನವದೆಹಲಿ, ಜ.29 (DaijiworldNews/PY): ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿ ಹಾಗೂ ಉತ್ತರಪ್ರದೇಶ ಗಡಿಯಲ್ಲಿರುವ ಗಾಜಿಪುರದ ಬಳಿ ರೈತರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
"ಪ್ರತಿಭಟನಾನಿರತ ರೈತರಿಗೆ ಗುರುವಾರ ರಾತ್ರಿ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲು ಇಲ್ಲಿಗೆ ಭೇಟಿ ನೀಡಿದ್ದೇನೆ" ಎಂದು ಸುದ್ದಿಸಂಸ್ಥೆಯೊಂದಕ್ಕೆ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.
ಕೃಷಿ ಕಾಯ್ದೆ ವಿರೋಧಿಸಿ ರೈತರ ಹೋರಾಟ ಮುಂದುವರೆದ ಹಿನ್ನೆಲೆ ನಿನ್ನೆ ರಾತ್ರಿಯಿಂದ ಗಾಜಿಪುರ ಗಡಿಯಲ್ಲು ಹೆಚ್ಚಿನ ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಗಡಿಯಲ್ಲಿ ಸಿಎಪಿಎಫ್ನ ಮೂರು ತುಕಡಿಗಳು, ಪ್ರಾಂತೀಯ ಸಶಸ್ತ್ರ ಕಾನ್ಸ್ಟಾಬ್ಯುಲರಿಯ ಆರು ತುಕಡಿಗಳು ಹಾಗೂ 1000 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಜಿಲ್ಲಾಡಳಿತವು, ರಸ್ತೆಗಳಲ್ಲಿ ಠಿಕಾಣಿ ಹೂಡುತ್ತಿರುವ ನೂರಾರು ಮಂದಿ ರೈತರಿಗೆ ವಿದ್ಯುತ್ ಹಾಗೂ ನೀರು ಸರಬರಾಜನ್ನು ಕಡಿತಮಾಡಿತ್ತು. ರೈತರು ಜ.26ರಂದು ದೆಹಲಿ ಚಲೋ ಪ್ರತಿಭಟನೆಯನ್ನು ಆರಂಭಿಸಿದಾಗಿನಿಂದಲೂ ಗಾಜಿಪುರ ಗಡಿಯನ್ನು ಮುಚ್ಚಲಾಗಿತ್ತು. ಆದರೆ, ಮಂಗಳವಾರದಂದು ರೈತರು ಬ್ಯಾರಿಕೇಡ್ಗಳನ್ನು ಮುರಿದು ಟ್ಯ್ರಾಕ್ಟರ್ ರ್ಯಾಲಿ ಕೈಗೊಂಡಿದ್ದರು.