ನವದೆಹಲಿ,ಜ.29 (DaijiworldNews/HR): "ಗಣರಾಜ್ಯೋತ್ಸವ ದಿನದಂದು ರೈತರು ನಡೆಸಿದ ಹಿಂಸಾಚಾರವನ್ನು ಖಂಡನೀಯವಾಗಿದ್ದು, ಅದನ್ನು ಒಪ್ಪಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರು ನೂತನ ಕೃಷಿ ಕಾಯ್ದೆಯನ್ನು ರೈತರ ಒಳಿತಿಗಾಗಿ ಜಾರಿಗೊಳಿಸಿದೆ" ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಈ ಕುರಿತು ಸಂಸತ್ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, "ಕೇಂದ್ರ ಸರ್ಕಾರ ಸುಮಾರು ಏಳು ತಿಂಗಳ ಕಾಲ ಚರ್ಚೆ ನಡೆಸಿ ಬಳಿಕ ಕೃಷಿ ನೀತಿಯನ್ನು ಜಾರಿಗೆ ತಂದಿತ್ತು. ಇದರಿಂದ ಹತ್ತು ಕೋಟಿ ರೈತರಿಗೆ ಲಾಭವಾಗಲಿದೆ. ಈ ಹಿಂದೆ ಹಲವು ರಾಜಕೀಯ ಪಕ್ಷಗಳು ಈ ಕಾಯ್ದೆಯನ್ನು ಬೆಂಬಲಿಸಿದ್ದವು. ಲೋಕಸಭೆಯಲ್ಲಿಯೂ ಮಸೂದೆ ಬಗ್ಗೆ ಚರ್ಚೆಯಾಗಿತ್ತು. ಆದರೆ ಇದೀಗ ಸುಪ್ರೀಂಕೋರ್ಟ್ ಆದೇಶದ ನಂತರ ತಡೆಹಿಡಿಯಲಾಗಿದೆ" ಎಂದರು.
ಇನ್ನು "ಮೋದಿ ನೇತೃತ್ವದ ಸರ್ಕಾರ ರೈತರ ಹಿತಾಸಕ್ತಿಗೆ, ಅಭಿವೃದ್ಧಿಗೆ ಬದ್ಧವಾಗಿದ್ದು, ಪ್ರತಿಭಟನೆ ಹೆಸರಿನಲ್ಲಿ ಹಿಂಸಾಚಾರವನ್ನು ನಡೆಸುವುದು ಒಪ್ಪಲು ಸಾಧ್ಯವಿಲ್ಲ ಇದೊಂದು ಖಂಡನೀಯ ಕೃತ್ಯವಾಗಿದೆ" ಎಂದು ಹೇಳಿದ್ದಾರೆ.
"ಕೊರೊನಾ ವಿರುದ್ಧ ನಾವೀಗ ಹೋರಾಟ ನಡೆಸಬೇಕಾದ ಕಾಲಘಟ್ಟದಲ್ಲಿದ್ದು, ನಾವು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಸಾವಿರಾರು ನಾಗರಿಕರನ್ನು ಕಳೆದುಕೊಂಡಿದ್ದು, ಅವರೆಲ್ಲರಿಗೂ ಈ ವೇಳೆ ಸಂತಾಪ ಸೂಚಿಸುತ್ತಿದ್ದೇನೆ" ಎಂದರು.