ಬೆಂಗಳೂರು,ಜ.29 (DaijiworldNews/HR): "ಮುಂದಿನ ದಿನಗಳಲ್ಲಿ ಮತ್ತೆ ಸಂಪುಟ ಪುನಾರಚನೆಯಾಗಬೇಕು, ಆಗ ಇತರರಿಗೂ ಖಾತೆ ನೀಡಬೇಕು. ನನಗಾಗ ಬೇರೆ ಖಾತೆ ನೀಡಿದರೂ ನಿಭಾಯಿಸುತ್ತೇನೆ ಜೊತೆಗೆ ಬೇರೆಯವರಿಗೆ ಬಿಟ್ಟುಕೊಡಲು ಸೂಚಿಸಿದರೆ ಸಚಿವ ಸ್ಥಾನ ಬಿಟ್ಟುಕೊಡುತ್ತೇನೆ" ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ರಾಜೀನಾಮೆ ನೀಡುತ್ತೇನೆಂದು ಮಾಧ್ಯಮದಲ್ಲಿ ಬಹಳಷ್ಟು ಸುದ್ದಿಗಳು ಹರಿದಾಡುತ್ತಿವೆ, ಸಚಿವ ಸ್ಥಾನ ಬದಲಿಸಿದಾಗ ಅಸಮಾಧಾನವಾಗಿದ್ದು ನಿಜ. ಆದರೆ ನನಗೆ ಅಸಮಾಧಾನವಿಲ್ಲ. ಸಿಎಂ ಜೊತೆ ಮಾತುಕತೆ ಮಾಡಿದ್ದೇನೆ" ಎಂದರು.
ಇನ್ನು "ಖಾತೆ ದೊಡ್ಡದು, ಚಿಕ್ಕದು ಎಂದೇನಿಲ್ಲ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸಿ, ಮುಖ್ಯಮಂತ್ರಿಗಳಿಗೆ ಸಹಕಾರ ಕೊಡಬೇಕು. ಸರ್ಕಾರಿ ಕೆಲಸ ದೇವರ ಕೆಲಸ ಅಂತ ವಿಧಾನಸೌಧದಲ್ಲಿ ಬರೆದಿದ್ದಾರೆ" ಎಂದರು.
"ನನಗೆ ಖಾತೆ ವಿಚಾರದಲ್ಲಿ ಯಾವುದೇ ಅಸಮಾಧಾನವಿಲ್ಲ. ಯಾವ ಖಾತೆ ನೀಡಿದರೂ ಬೇಸರವಿಲ್ಲ. ಇಂದೇ ಖಾತೆ ಅಧಿಕಾರ ವಹಿಸಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.