ನವದೆಹಲಿ, ಜ.29 (DaijiworldNews/HR): ಜನವರಿ 26ರಂದು ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಅಯೋಧ್ಯೆಯ ಪರಂಪರೆಯನ್ನು ಬಿಂಬಿಸುವ ಉತ್ತರ ಪ್ರದೇಶದ ಸ್ತಬ್ಧಚಿತ್ರವು ಮೊದಲ ಸ್ಥಾನಗಳಿಸಿದೆ ಎಂದು ತಿಳಿದುಬಂದಿದೆ.
ಸ್ತಬ್ಧಚಿತ್ರದ ಒಂದು ಬದಿಯಲ್ಲಿ ಗಿನ್ನಿಸ್ ದಾಖಲೆಗೆ ಸೇರಿರುವ ಅಯೋಧ್ಯೆಯ ದೀಪೋತ್ಸವ ಆಚರಣೆಯ ವಿವರಗಳಿದ್ದು, ಜೊತೆಗೆ ಶ್ರೀರಾಮ, ಶಬರಿ, ಅಹಿಲ್ಯಾ, ಹನುಮಾನರ ಉಬ್ಬುಕಲಾಕೃತಿಗಳು ಇದ್ದವು.
ಇನ್ನು ಉತ್ತರ ಪ್ರದೇಶ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ 17 ಸ್ತಬ್ಧಚಿತ್ರಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದವು.
ಪಥಸಂಚಲನದಲ್ಲಿ ತ್ರಿಪುರಾದ ಸ್ತಬ್ಧಚಿತ್ರವು ಎರಡನೇ ಸ್ಥಾನ ಪಡೆದುಕೊಂಡು, ಉತ್ತರಖಾಂಡ ರಾಜ್ಯವು ಮೂರನೇ ಸ್ಥಾನಗಳಿಸಿದೆ.
ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡುವಾಗ ಕಲೆ, ಸಂಸ್ಕೃತಿ, ಚಿತ್ರಕಲೆ, ಶಿಲ್ಪಕಲೆ, ಸಂಗೀತ, ವಸ್ತುಶಿಲ್ಪ, ನೃತ್ಯ ಸಂಯೋಜನೆ ಮತ್ತಿತರ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡಿರುವ ತಜ್ಞರ ಸಮಿತಿ ಅನೇಕ ಸಭೆಗಳನ್ನು ನಡೆಸಿ ಬಳಿಕ ಪರಿಶೀಲಿಸಿ ಉತ್ತಮ ಸ್ತಬ್ಧಚಿತ್ರವನ್ನು ಆಯ್ಕೆ ಮಾಡುತ್ತದೆ.