ನವದೆಹಲಿ, ಜ.29 (DaijiworldNews/PY): ಗಣರಾಜ್ಯೋತ್ಸವ ದಿನದಂದು ಟ್ಯ್ರಾಕ್ಟರ್ ರ್ಯಾಲಿಯಲ್ಲಿ ಸಾವನ್ನಪ್ಪಿದ್ದ ಯುವಕನೋರ್ವನ ಸಾವಿಗೆ ಸಂಬಂಧಪಟ್ಟಂತೆ ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕ ಶಶಿ ತರೂರ್ ಸೇರಿ ಹಲವರ ವಿರುದ್ದ ಉತ್ತರಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕಾಂಗ್ರೆಸ್ ನಾಯಕ ಶಶಿ ತರೂರ್ ಸೇರಿದಂತೆ ದಿ ಕ್ಯಾರವನ್ ಸುದ್ದಿ ಸಮೂಹದ ಅನಂತ್ನಾಥ್, ನ್ಯಾಷನಲ್ ಹೆರಾಲ್ಡ್ನ ಮ್ರಿನಾಲ್ ಪಾಂಡೆ, ಹಿರಿಯ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ,ವಿನೋದ್ ಜೋಶ್ ಹಾಗೂ ಕೌಮಿ ಆವಾಜ್ನ ಜಾಫರ್ ಆಘಾ ಅವರ 11 ಐಪಿಸಿ ವಿರುದ್ದ ಎಫ್ಐಆರ್ ದಾಖಲಾಗಿದೆ.
ಗಣರಾಜ್ಯೋತ್ಸವದಂದು ಟ್ಯ್ರಾಕ್ಟರ್ ರ್ಯಾಲಿಯ ಸಂದರ್ಭ ಟ್ಯ್ರಾಕ್ಟರ್ ಮಗುಚಿ ಬಿದ್ದು ಯುವಕನೋರ್ವ ಸಾವನ್ನಪ್ಪಿದ್ದ. ಆದರೆ, ಈ ಸುದ್ದಿಯನ್ನು ಯುವಕ ಪೊಲೀಸರ ಗುಂಡೇಟಿಗೆ ಸಾವನ್ನಪ್ಪಿದ್ದಾನೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಮಾಧ್ಯಮದ ವರದಿಗಳನ್ನು ಶಶಿ ತರೂರ್ ಸೇರಿ ಹಲವು ಪತ್ರಕರ್ತರು ಟ್ವೀಟ್ ಮಾಡಿದ್ದರು. ಆದರೆ, ಪೊಲೀಸರ ಗುಂಡೇಟಿಗೆ ಯುವಕ ಸಾವನ್ನಪ್ಪಿಲ್ಲ ಎಂದು ಪೋಸ್ಟ್ಮಾರ್ಟಂ ವರದಿ ಬಂದ ಬಳಿಕ ತಿಳಿದುಬಂದಿದೆ.
"ಯುವಕನ ಸಾವಿನ ಬಗೆಗಿನ ವರದಿಯನ್ನು ತಿರುಚಲಾಗಿದ್ದು, ಇದು ಪೂವಾಗ್ರಹ ಪೀಡಿತವಾಗಿದೆ. ಇವರು ರಾಷ್ಟ್ರೀಯ ಸುರಕ್ಷತೆ ಹಾಗೂ ಜನರ ಜೀವನವನ್ನು ಅಪಾಯಕ್ಕೆ ತಂದೊಡಿದ್ದಾರೆ" ಎಂದು ಯುಪಿ ಪೊಲೀಸರು ಹೇಳಿದ್ದಾರೆ.