ನವದೆಹಲಿ, ಜ.29 (DaijiworldNews/PY): "ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಆದರೆ, ಪ್ರತಿಭಟನೆ ಅಂತ್ಯಗೊಳಿಸುವುದಿಲ್ಲ" ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ಪ್ರತಿಭಟನೆ ಅಂತ್ಯಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಉತ್ತರಪ್ರದೇಶದ ಗಾಜಿಪುರ್ ಜಿಲ್ಲಾಡಳಿತ ಗುರುವಾರ ಆದೇಶ ನೀಡಿದ್ದು, ಅಲ್ಲದೇ, ರೈತರು ಈಗಾಗಲೇ ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ನೆರೆದಿದ್ದಾರೆ ಎಂದು ತಿಳಿದುಬಂದಿದೆ.
"ರೈತರನ್ನು ಹತ್ಯೆ ಮಾಡಲು ಬಿಜೆಪಿ ಷಡ್ಯಂತ್ರ ರೂಪಿಸಿದ್ದು, ಈಗಾಗಲೇ ಹಲವಾರು ಶಾಸಕರು ಹಾಗೂ ಅವರ ಬೆಂಬಲಿಗರು ಬಂದು ನೆರೆದಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಪೊಲೀಸರು ಕೂಡಾ ಇದ್ದಾರೆ. ಈ ದೇಶ ನಮ್ಮ ಮೇಲೆ ಆಕ್ರಮಣ ನಡೆಸಲು ಬಿಡುವುದಿಲ್ಲ. ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲು ನಾವು ತಯಾರಿದ್ದೇವೆ. ಆದರೆ, ಯಾವುದೇ ಕಾರಣಕ್ಕೂ ನಾವು ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ" ಎಂದಿದ್ದಾರೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ರಾಕೇಶ್ ಟಿಕಾಯತ್ ಅವರ ಬೆಂಬಲಕ್ಕೆ ಹಲವಾರು ಸಾಮಾಜಿಕ ಹೋರಾಟಗಾರರು ನಿಂತಿದ್ದಾರೆ.
ಈ ಬಗ್ಗೆ ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಸೇರಿದಂತೆ ಹಲವಾರು ರಾಜಕಾರಣಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಟ್ವೀಟ್ ಮಾಡಿದ್ದು, "ಪ್ರತಿಭಟನಾ ಸ್ಥಳದಿಂದ ರೈತರನ್ನು ತೆರವುಗೊಳಿಸುವ ಸಲುವಾಗಿ ಗಾಝಿಯಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಪೊಲೀಸರು ಇಂದು ರಾತ್ರಿ ರೈತರ ಮೇಲೆ ಕಾರ್ಯಚರಣೆ ನಡೆಸುವ ಸಾಧ್ಯತೆ ಇದೆ" ಎಂದಿದ್ದಾರೆ.