ಸುರತ್ಕಲ್, ಜ 28 (DaijiworldNews/SM): ಬೈಕ್ ನಲ್ಲಿ ತೆರಳುದ್ದ ವೇಳೆ ದುಷ್ಕರ್ಮಿಗಳ ತಂಡವೊಂದು ಯುವಕನ ಕೊಲೆ ಯತ್ನ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಾಟಿಪಳ್ಳ ನಿವಾಸಿ ಶ್ರೀನಿವಾಸ(20), ರಾಜು(20) ಹಾಗೂ ಅಭಿಷೇಕ್(18) ಎಂದು ಗುರುತಿಸಲಾಗಿದೆ. ಜನವರಿ 27ರ ಬುಧವಾರ ತಡರಾತ್ರಿ ಸುಮಾರು 10:45 ರ ವೇಳೆಗೆ ಕಾಟಿಪಳ್ಳ ನಿವಾಸಿ ತನ್ನ ಸ್ನೇಹಿತನೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಮತ್ತೊಂದು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಬೈಕ್ ಅಡ್ಡಗಟ್ಟಿ ಚೂರಿಯಿಂದ ಇರಿದು ಹತ್ಯೆಗೆ ಯತ್ನಿಸಿದ್ದಾರೆ. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಗೊಳಿಸಿರುವ ಸುರತ್ಕಲ್ ಠಾಣಾ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಲ್ಲಿ ಶ್ರೀನಿವಾಸ ನ ವಿರುದ್ಧ ಈಗಾಗಲೇ ಮೂರು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಅಲ್ಲದೆ, ಇನ್ನೋರ್ವ ಆರೋಪಿ ರಾಜು ವಿರುದ್ಧ ಎರಡು ಪ್ರಕರಣಗಳು ದಾಖಲಾಗಿರುವ ಬಗ್ಗೆಯೂ ಮಾಹಿತಿ ಲಭಿಸಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ವಾಹನ, ಆಯುಧಗಳನ್ನು ವಶಪಡಿಕೊಳ್ಳಲಾಗಿದೆ.