ಬೆಂಗಳೂರು, ಜ.28 (DaijiworldNews/PY): "ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಜನಪ್ರಿಯತೆ ಗಳಿಸಲು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ನಾನು ಅವರ ಹೇಳಿಕೆಯನ್ನು ಖಂಡಿಸುತ್ತೇನೆ" ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ. ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಹ.ನೀ.ದೀಪಕ್ ಅವರ ನೇತೃತ್ವದ ಕರುನಾಡು ವಿಜಯಸೇನೆಯ ಕೇಂದ್ರ ಕಚೇರಿ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, "ಕರ್ನಾಟಕ ರಾಜ್ಯದ ಯಾವ ಪ್ರದೇಶದಲ್ಲಿ ಮರಾಠಿಗರು ವಾಸಿಸುತ್ತಿದ್ದಾರೋ ಆ ಪ್ರದೇಶಗಳೇ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಮಹಾರಾಷ್ಟ್ರ ಸಿಎಂ ಹೇಳಿದ್ದಾರೆ" ಎಂದರು.
"ಇದೇ ರೀತಿ ಮಹಾರಾಷ್ಟ್ರ ಹಾಗೂ ಮುಂಬೈನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕದ ವಿವಿಧ ಭಾಗಗಳ ಜನರು ವಾಸಿಸುತ್ತಿದ್ದು, ಕರ್ನಾಟಕಕ್ಕೆ ಆ ಪ್ರದೇಶಗಳನ್ನು ಸೇರಿಸಿ ಎಂದು ಕೇಳುವುದು ಸರಿಯಾವುದೇ?" ಎಂದು ಕೇಳಿದರು.