ನವದೆಹಲಿ, ಜ.28 (DaijiworldNews/PY): "ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಕಳೆದ ಏಳು ದಿನಗಳಲ್ಲಿ 146 ಜಿಲ್ಲೆಗಳಲ್ಲಿ ಕೊರೊನಾದ ಹೊಸ ಪ್ರಕರಣಗಳು ವರದಿಯಾಗಿಲ್ಲ" ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದರು.
ಕೊರೊನಾ ಕುರಿತ ಉನ್ನತ ಮಟ್ಟದ ಸಚಿವರ ತಂಡದ ಜೊತೆ ನಡೆಸಿದ 23ನೇ ಸಭೆಯ ವೇಳೆ ಮಾತನಾಡಿದ ಅವರು, "ಕಳೆದ 28 ದಿನಗಳಿಂದ 21 ಜಿಲ್ಲೆಗಳಲ್ಲಿ, ಕಳೆದ 21 ದಿನಗಳಲ್ಲಿ ಆರು ಜಿಲ್ಲೆಗಳಲ್ಲಿ ಹಾಗೂ 18 ಜಿಲ್ಲೆಗಳಲ್ಲಿ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ" ಎಂದು ಹೇಳಿದರು.
"ದೇಶದಲ್ಲಿ ಇದುವರೆಗೆ ನಡೆಸಿದ 19.5 ಕೋಟಿಗೂ ಅಧಿಕ ಕೊರೊನಾ ಪರೀಕ್ಷೆಗಳನ್ನು ಮಾಡಿದ ಕಾರಣ ಈಗ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ದೇಶದಲ್ಲಿ ಪ್ರತಿನಿತ್ಯ ಸುಮಾರು 12 ಲಕ್ಷ ಪರೀಕ್ಷೆಗಳು ನಡೆಯುತ್ತಿದ್ದು, ಕಳೆದ 24 ಗಂಟೆಯಲ್ಲಿ 12 ಸಾವಿರಕ್ಕಿಂತಲೂ ಕಡಿಮೆ ಕೊರೊನಾ ಪ್ರಕರಣಗಳು ವರದಿಯಾಗಿವೆ" ಎಂದರು.
"ರೂಪಾಂತರಿ ಕೊರೊನಾ ವೈರಸ್ ಮೊದಲು ಬ್ರಿಟನ್ನಲ್ಲಿ ಕಾಣಿಸಿಕೊಂಡಿದ್ದು, ದೇಶದಲ್ಲಿ 165 ಮಂದಿಯಲ್ಲಿ ಪತ್ತೆಯಾಗಿದೆ. ಅವರನ್ನು ಕ್ವಾರಂಟೈನ್ ಮಾಡಲಾಗಿದೆ" ಎಂದು ಹೇಳಿದರು.
"ಮುಂಬೈ ಸೇರಿದಂತೆ ಎರ್ನಾಕುಳಂ, ತಿರುವನಂತಪುರ, ಕೋಯಿಕ್ಕೋಡ್ ಹಾಗೂ ಕೋಟ್ಟಯಂ ಜಿಲ್ಲೆಗಳಲ್ಲಿ ಸದ್ಯ ಅಧಿಕ ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳ ಪೈಕಿ ಶೇ.70ರಷ್ಟು ಪ್ರಕರಣಗಳು ಕೇರಳ ಹಾಗೂ ಮಹಾರಾಷ್ಟ್ರದಲ್ಲಿವೆ" ಎಂದು ಸಭೆಗೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಡಾ.ಸುಜೀತ್ ಕೆ.ಸಿಂಗ್ ತಿಳಿಸಿದರು.