ಚಂಡೀಗಡ, ಜ.28 (DaijiworldNews/PY): "ರೈತ ಮುಖಂಡರು ತಮ್ಮ ವಿರುದ್ದ ದ್ವೇಷ ಹರಡುತ್ತಿದ್ದಾರೆ" ಎಂದು ನಟ ಹಾಗೂ ಹೋರಾಟಗಾರ ದೀಪ್ ಸಿಧು ಆರೋಪಿಸಿದ್ದಾರೆ.
ಈ ಬಗ್ಗೆ ಫೇಸ್ಬುಕ್ ವಿಡಿಯೋದಲ್ಲಿ ಪ್ರತಿಕ್ರಿಯೆ ನೀಡಿದ ಅವರು, "ಯುವಕರು, ರೈತ ಮುಖಂಡರು ಹಾಗೂ ದೆಹಲಿ ಪೊಲೀಸರು ನಿಗದಿಪಡಿಸಿದ ಮಾರ್ಗದಲ್ಲಿ ಹೋಗಲು ಸಿದ್ದರಿರಲಿಲ್ಲ" ಎಂದಿದ್ದಾರೆ.
"ಕೆಂಪುಕೋಟೆಯತ್ತ ಯುವಕರ ಗುಂಪನ್ನು ಸಾಗಿಸಲಿ ಪ್ರಚೋದನೆ ನೀಡಲಾಗಿದೆ ಎನ್ನುವ ಆರೋಪವನ್ನು ತಳ್ಳಿ ಹಾಕಿರುವ ಸಿಧು, ಜನರು ತಮ್ಮ ಸ್ವಂತ ನಿರ್ಧಾರದ ಮೇರೆಗೆ ಕೆಂಪುಕೋಟೆಗೆ ತೆರಳಿದ್ದರು" ಎಂದು ಹೇಳಿದ್ದಾರೆ.
"ಕೆಂಪುಕೋಟೆಯಲ್ಲಿ ಆರ್ಎಸ್ಎಸ್ ಅಥವಾ ಬಿಜೆಪಿಯ ವ್ಯಕ್ತಿ ನಿಶಾನ್ ಸಾಹಿಬ್ ಹಾಗೂ ರೈತರ ಧ್ವಜವನ್ನು ಹಾರಿಸುತ್ತಾರೆಯೇ?. ಈ ಬಗ್ಗೆ ಯೋಚನೆ ಮಾಡಿ" ಎಂದಿದ್ದಾರೆ.
"ಕೆಂಪುಕೋಟೆಯತ್ತ ಸಾವಿರಾರು ಮಂದಿ ತೆರಳಿದ್ದರು. ಆದರೆ, ಅಲ್ಲಿ ಯಾವುದೇ ರೈತ ಮುಖಂಡರು ಇರಲಿಲ್ಲ. ಯಾರೂ ಹಿಂಸಾಚಾರಕ್ಕೆ ತಿರುಗಿಲ್ಲ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿಲ್ಲ" ಎಂದು ಹೇಳಿದ್ದಾರೆ.
"ರೈತರು ಗಣರಾಜ್ಯೋತ್ಸವ ದಿನದಂದು ಹಮ್ಮಿಕೊಂಡಿದ್ದ ಟ್ಯ್ರಾಕ್ಟರ್ ರ್ಯಾಲಿಯ ಸಂದರ್ಭ ನಡೆದ ಹಿಂಸಾಚಾರದಲ್ಲಿ ದೀಪ್ ಸಿಧು ಅವರು ಪಿತೂರಿ ನಡೆಸಿದ್ದಾರೆ" ಎಂದು ರೈತ ಮುಖಂಡರು ಆರೋಪ ನಡೆಸಿದ್ದರು.
ಕೆಂಪುಕೋಟೆಯ ಮೇಲೆ ಧಾರ್ಮಿಕ ಧ್ವಜ ಹಾರಿಸಿದ್ದ ಪ್ರತಿಭಟನಾಕಾರರ ಪೈಕಿ ಒಬ್ಬರಾಗಿದ್ದ ದೀಪ್ ಸಿಧು ಅವರ ವಿರುದ್ದ ಕೂಡಾ ದೆಹಲಿ ಪೊಲೀಸ್ ಎಫ್ಐಆರ್ ದಾಖಲಿಸಿದೆ.