ಕೋಲ್ಕತ್ತ, ಜ.28 (DaijiworldNews/PY): ರಾಜ್ಯ ವಿಧಾನಸಭೆಯಲ್ಲಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರ ಗುರುವಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ನಿರ್ಣಯವನ್ನು ಮಂಡಿಸಿದೆ.
ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಪಾರ್ಥಾ ಚಟರ್ಜಿ ಅವರು ನಿರ್ಣಯವನ್ನು ಮಂಡಿಸಿದ್ದು, "ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳು ರೈತ ವಿರೋಧಿಯಾಗಿವೆ. ಇವುಗಳಿಂದ ಕಾರ್ಪೋರೇಟ್ ಸಂಸ್ಥೆಗಳಿಗೆ ನೆರವಾಗಲಿದೆ" ಎಂದಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರ ನಿರ್ಣಯ ಮಂಡಿಸಿದ ಸಂದರ್ಭ ಬಿಜೆಪಿ ಶಾಸಕರು ಸದಸನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದು, ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಸದನವನ್ನು ತ್ಯಜಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, "ರೈತರ ಜೊತೆ ನಾವಿದ್ದೇವೆ. ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಇಚ್ಛಿಸುತ್ತೇವೆ. ಕೃಷಿ ಕಾಯ್ದೆಗಳನ್ನು ಬಲವಂತವಾಗಿ ಜಾರಿಗೆ ತರಲಾಗಿದೆ" ಎಂದು ಕಿಡಿಕಾರಿದ್ದಾರೆ.
ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಪರಿಸ್ಥಿತಿ ನಿಭಾಯಿಸಲು ಪ್ರಧಾನಿ ಮೋದಿ ಸರ್ಕಾರ ವಿಫಲವಾಗಿದೆ. ಇದಕ್ಕೆ ಬಿಜೆಪಿ ಸರ್ಕಾರ ಕಾರಣ. ದೆಹಲಿಯ ಪರಿಸ್ಥಿತಿಯನ್ನು ಮೊದಲು ನಿಭಾಯಿಸಿ ಬಳಿಕ ಪಶ್ಚಿಮ ಬಂಗಾಳದ ಬಗ್ಗೆ ಗಮನಹರಿಸಿ" ಎಂದಿದ್ದಾರೆ.
"ದೆಹಲಿಯಲ್ಲಿ ನಡೆದ ಹಿಂಸಾಚಾರದ ಪರಿಸ್ಥಿತಿಯನ್ನು ಪೊಲೀಸರಿಗೆ ನಿಭಾಯಿಸಲು ಆಗಲಿಲ್ಲ. ಒಂದು ವೇಳೆ ಈ ರೀತಿಯಾದ ಪರಿಸ್ಥಿತಿ ಪಶ್ಚಿಮ ಬಂಗಾಳದಲ್ಲಿ ನಿರ್ಮಾಣವಾಗಿದ್ದರೆ, ಅಮಿತ್ ಶಾ ಏನಾಯಿತು? ಎಂದು ಖಂಡಿಸುತ್ತಿದ್ದರು. ಕಾನೂನುಗಳನ್ನು ರದ್ದುಗೊಳಿಸಿ ಇಲ್ಲವಾದಲ್ಲಿ ಕುರ್ಚಿ ಬಿಟ್ಟು ಹೋಗಿ ಎಂದು ವಾಗ್ದಾಳಿ" ನಡೆಸಿದ್ದಾರೆ.