ಬೆಂಗಳೂರು, ಜ.28 (DaijiworldNews/MB) : ''ಸುಳ್ಳು, ತಪ್ಪು ಮಾಹಿತಿ ಮತ್ತು ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ರಾಜ್ಯಪಾಲರ ಭಾಷಣದಲ್ಲಿ ಹೇಳಿಸಿ ಬಿಜೆಪಿ ತನ್ನ ವೈಫಲ್ಯ ಮುಚ್ಚಿಡುವ ಹತಾಶ ಯತ್ನ ಮಾಡಿದೆ'' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದೂರಿದ್ದಾರೆ.
ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜುಬಾಯಿ ವಾಲಾ ಭಾಷಣ ಮಾಡಿ ಬಿಎಸ್ವೈ ಸರ್ಕಾರದ ಯೋಜನೆಗಳನ್ನು ಹಾಡಿಹೊಗಳಿದ್ದರು.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ''ಒಂದಷ್ಟು ಸುಳ್ಳು, ಇನ್ನೊಂದಿಷ್ಟು ತಪ್ಪು ಮಾಹಿತಿ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ರಾಜ್ಯಪಾಲರ ಭಾಷಣದಲ್ಲಿ ಹೇಳಿಸುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಹತಾಶ ಪ್ರಯತ್ನ ನಡೆಸಿದೆ'' ಎಂದು ದೂರಿದ್ದಾರೆ.
''ಕೊರೊನಾದಂತಹ ಮಾರಕ ರೋಗವನ್ನು ಬ್ರಹ್ಮಾಂಡ ಭ್ರಷ್ಟಚಾರವೆಸಗಲು ದುರುಪಯೋಗ ಪಡಿಸಿಕೊಂಡ ಬಿ ಎಸ್ ಯಡಿಯೂರಪ್ಪ ಸರ್ಕಾರ, ರೋಗ ನಿಯಂತ್ರಣದಲ್ಲಿನ ವೈಫಲ್ಯಗಳನ್ನು ಸುಳ್ಳು ಅಂಕಿ ಅಂಶಗಳ ಮೂಲಕ ಮರೆಮಾಚಲು ಪ್ರಯತ್ನಿಸಿದೆ'' ಎಂದು ಆರೋಪಿಸಿದ್ದಾರೆ.
''ತೆರಿಗೆಯಲ್ಲಿ ಪಾಲು, 15ನೇ ಹಣಕಾಸು ಆಯೋಗದ ಅನುದಾನ ಮತ್ತು ಜಿಎಸ್ ಟಿ ಪರಿಹಾರದಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿವರವನ್ನು ರಾಜ್ಯಪಾಲರ ಭಾಷಣದಲ್ಲಿ ನೀಡಿದ್ದರೆ ಬಿ ಎಸ್ ಯಡಿಯೂರಪ್ಪ ಸರ್ಕಾರದ ಬಣ್ಣ ಸಂಪೂರ್ಣ ಬಯಲಾಗುತ್ತಿತ್ತು'' ಎಂದು ಹೇಳಿದ್ದಾರೆ.
''ಕಳೆದ ವರ್ಷ ಅತಿವೃಷ್ಟಿಯಿಂದ 9,94,556 ಹೆಕ್ಟೇರ್ ಬೆಳೆ ನಾಶವೂ ಸೇರಿದಂತೆ ಒಟ್ಟು ನಷ್ಟಕ್ಕೆ ರೂ.25,518 ಕೋಟಿ ಪರಿಹಾರ ಕೇಳಿದ್ದ ರಾಜ್ಯ ಬಿಜೆಪಿ ಸರ್ಕಾರ, ಈ ಬಾರಿ 20,86,703 ಹೆಕ್ಟೇರ್ ಬೆಳೆ ನಾಶ ಸೇರಿದಂತೆ ಒಟ್ಟು ನಷ್ಟಕ್ಕೆ ರೂ.24,941.73 ಕೋಟಿ ಪರಿಹಾರವನ್ನು ಕೇಳಿ ರಾಜ್ಯಕ್ಕೆ ದ್ರೋಹ ಬಗೆದಿದೆ'' ಎಂದಿದ್ದಾರೆ.
''ಕಳೆದ ವರ್ಷ ರೂ.25,518 ಕೋಟಿ ಪರಿಹಾರ ಕೇಳಿದರೂ ಕೇಂದ್ರದಿಂದ ಕೇಳಿದರೂ ಸಿಕ್ಕಿರುವುದು ಮಾತ್ರ ರೂ.1,634 ಕೋಟಿ ಮಾತ್ರ. ರಾಜ್ಯ ಬಿಜೆಪಿ ಸರ್ಕಾರ ಸಮರ್ಪಕ ಸಮೀಕ್ಷಾ ವರದಿ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಿದರೆ ಮಾತ್ರ ಹೆಚ್ಚಿನ ಪರಿಹಾರ ಸಿಗಲು ಸಾಧ್ಯ'' ಎಂದು ಅಭಿಪ್ರಾಯಿಸಿದ್ದಾರೆ.
''ಮಳೆ ಮತ್ತು ಪ್ರವಾಹದ ನಷ್ಟಕ್ಕೆ ರಾಜ್ಯ ಸರ್ಕಾರ ಇಲ್ಲಿಯವರೆಗೆ ನೀಡಿರುವ ಪರಿಹಾರ ಕೇವಲ ರೂ.36.57 ಕೋಟಿ ಮಾತ್ರ. ಎರಡನೇ ಹಂತದಲ್ಲಿ ಗುರುತಿಸಲಾದ ಸಂತ್ರಸ್ತರಲ್ಲಿ ಯಾರೊಬ್ಬರಿಗೂ ಸೂಕ್ತ ಪರಿಹಾರಧನ ಈ ವರೆಗೆ ತಲುಪಿಲ್ಲ'' ಎಂದು ಸಿಡಿಮಿಡಿಗೊಂಡಿದ್ದಾರೆ.