ಬೆಂಗಳೂರು, ಜ.28 (DaijiworldNews/PY): "ನನ್ನನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಷಡ್ಯಂತ್ರ ನಡೆಸಿವೆ" ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್ ಕೆಂಡಕಾರಿದ್ದಾರೆ.
ಸುಪ್ರೀಂ ಕೋರ್ಟ್ನ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕೋರ್ಟ್ನ ಈ ಆದೇಶವನ್ನು ನಾನು ಸ್ವಾಗತಿಸುತ್ತೇನೆ. ಮುಂದಿನ ನಡೆಯ ಬಗ್ಗೆ ವಕೀಲರ ಬಳಿ ಚರ್ಚಿಸುತ್ತೇನೆ. ನಾನು ಕಾನೂನು ಹೋರಾಟ ಮಾಡುತ್ತೇನೆ" ಎಂದಿದ್ದಾರೆ.
"ವಿಧಾನಸಭೆಯಿಂದ ಪರಿಷತ್ಗೆ ಆಯ್ಕೆಯಾಗುವಂತ ಅವಕಾಶವನ್ನು ಕೂಡಾ ತಪ್ಪಿಸಿದ್ದಾರೆ. ಎಂದಿಗೂ ಕೂಡಾ ನಮ್ಮ ತ್ಯಾಗವನ್ನು ಮರೆಯಬಾರದು. ಯಾರ ಕಾರಣದಿಂದ ಈ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎನ್ನುವ ವಿಚಾರವನ್ನು ನೆನಪಿಟ್ಟುಕೊಳ್ಳಬೇಕು. ಇನ್ನು ನಾನು ಪರಿಷತ್ ಸದಸ್ಯನಾಗಿರುತ್ತೇನೆ" ಎಂದು ಹೇಳಿದ್ದಾರೆ.
"ನನಗೆ ಈ ವಿಧಾನಸಭೆಯ ಅವಧಿಯವರೆಗೆ ಮಾತ್ರ ತೊಡಕಾಗಬಹುದು. ಆ ಅವಧಿ ಮುಗಿದ ನಂತರ ಸಚಿವನಾಗಬಹುದು. ರಾಜಕೀಯದಲ್ಲಿ ಇವೆಲ್ಲಾ ಸಹಜ. ಇದು ಹೊಂದಾಣಿಕೆಯ ರಾಜಕೀಯ" ಎಂದಿದ್ದಾರೆ.
ತಾನು ಸಚಿವನಾಗುವುದು ಅಸಾಂವಿಧಾನಿಕ ಎಂದು ಕರ್ನಾಟಕ ಹೈ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ವಿಧಾನ ಪರಿಷತ್ ಸದಸ್ಯ (ಎಂಎಲ್ಸಿ), ಬಿಜೆಪಿಯ ಎ.ಎಚ್.ವಿಶ್ವನಾಥ್ ಅವರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ವಿಧಾನ ಪರಿಷತ್ತಿಗೆ ವಿಶ್ವನಾಥ್ ಅವರು ನಾಮನಿರ್ದೇಶನವಾಗಿರುವ ಹಿನ್ನೆಲೆ ಸಂವಿಧಾನದ 164(1–ಬಿ) ಮತ್ತು 361–ಬಿ ಪ್ರಕಾರ ಅನರ್ಹತೆ ಮುಂದುವರೆದಿದ್ದು ವಿಧಾನಸಭೆಯ ಅವಧಿ ಅಂತ್ಯದವರೆಗೂ ಅನರ್ಹತೆ ಇರಲಿದೆ. ಅಷ್ಟರಲ್ಲಿ ವಿಶ್ವನಾಥ್ ಅವರು ಶಾಸಕರಾಗಿ ಚುನಾಯಿತರಾದರೆ ಈ ಅನರ್ಹತೆ ಮುಂದುವರಿಯುವುದಿಲ್ಲ ಎಂದು ಹೈಕೋಟ್ ಈ ಹಿಂದೆ ತಿಳಿಸಿತ್ತು.
ಹೈಕೋರ್ಟ್ನ ಸಚಿವ ಸ್ಥಾನಕ್ಕೆ ಸೇರ್ಪಡೆಯಾಗಲು ಅರ್ಹರಲ್ಲ ಎಂಬ ಆದೇಶವನ್ನು ಪ್ರಶ್ನಿಸಿ ಎ.ಎಚ್. ವಿಶ್ವನಾಥ್, ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಆದರೆ, ಹೈಕೋರ್ಟ್ ಆದೇಶ ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್ ವಿಶ್ವನಾಥ್ ಅರ್ಜಿಯನ್ನು ವಜಾಗೊಳಿಸಿದೆ.