ಮುಂಬೈ,ಜ. 28 (DaijiworldNews/HR): "ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದು, ಪ್ರತಿಭಟನೆಗೆ ಕೆಟ್ಟ ಹೆಸರು ಬರಲಿ ಎಂಬುದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಇಚ್ಛೆಯಾಗಿತ್ತು" ಎಂದು ಶಿವಸೇನಾ ಆರೋಪಿಸಿದೆ.
ಈ ಕುರಿತು ಶಿವಸೇನಾ ತನ್ನ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಬರೆದಿದ್ದು, "ನೂತನ ಕೃಷಿ ಕಾಯ್ದೆ ವಿರುದ್ಧ ರೈತರು 60 ದಿನಗಳಿಂದ ದೆಹಲಿ ಗಡಿ ಪ್ರದೇಶದಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದಾರೆ. ಈ ವೇಳೆ ಅವರು ತಾಳ್ಮೆಯನ್ನು ಕಳೆದುಕೊಂಡಿಲ್ಲ. ಅಲ್ಲದೆ ಅವರ ನಡುವೆ ಬಿರುಕು ಕೂಡ ಬಂದಿರಲಿಲ್ಲ" ಎಂದಿದೆ.
"ಕೇಂದ್ರ ಸರ್ಕಾರಕ್ಕೆ ರೈತರ ಪ್ರತಿಭಟನೆಯನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ.ಹಾಗಾಗಿ ರೈತರನ್ನು ಕೆರಳಿಸಿ, ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆಯುವಂತೆ ಪ್ರಚೋದಿಸಲಾಗುತ್ತಿದೆ. ಅವರ ಪ್ರತಿಭಟನೆಗೆ ಕೆಟ್ಟ ಹೆಸರು ಬರಲಿ ಎಂಬುದು ಕೇಂದ್ರ ಸರ್ಕಾರ ಬಯಕೆಯಾಗಿದೆ" ಎಂದು ಬರೆಯಲಾಗಿದೆ.
ಇನ್ನು "ಕೇಂದ್ರ ಸರ್ಕಾರ ಇಚ್ಚಿಸಿದಂತೆ ಜನವರಿ 26 ರಂದು ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿತ್ತು, ಆದರೆ ಈ ಘಟನೆಯೂ ರೈತರಿಗೆ ಮಾತ್ರವಲ್ಲದೇ ದೇಶಕ್ಕೂ ಕೆಟ್ಟ ಹೆಸರು ತಂದಿದೆ"ಎಂದು ಶಿವಸೇನಾ ಸಂಪಾದಕೀಯದಲ್ಲಿ ಹೇಳಲಾಗಿದೆ.