ನವದೆಹಲಿ, ಜ.28 (DaijiworldNews/MB) : ತಾನು ಸಚಿವನಾಗುವುದು ಅಸಾಂವಿಧಾನಿಕ ಎಂದು ಕರ್ನಾಟಕ ಹೈ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ವಿಧಾನ ಪರಿಷತ್ ಸದಸ್ಯ (ಎಂಎಲ್ಸಿ), ಬಿಜೆಪಿಯ ಎ.ಎಚ್.ವಿಶ್ವನಾಥ್ ಅವರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ವಿಧಾನ ಪರಿಷತ್ತಿಗೆ ವಿಶ್ವನಾಥ್ ಅವರು ನಾಮನಿರ್ದೇಶನವಾಗಿರುವ ಹಿನ್ನೆಲೆ ಸಂವಿಧಾನದ 164(1–ಬಿ) ಮತ್ತು 361–ಬಿ ಪ್ರಕಾರ ಅನರ್ಹತೆ ಮುಂದುವರೆದಿದ್ದು ವಿಧಾನಸಭೆಯ ಅವಧಿ ಅಂತ್ಯದವರೆಗೂ ಅನರ್ಹತೆ ಇರಲಿದೆ. ಅಷ್ಟರಲ್ಲಿ ವಿಶ್ವನಾಥ್ ಅವರು ಶಾಸಕರಾಗಿ ಚುನಾಯಿತರಾದರೆ ಈ ಅನರ್ಹತೆ ಮುಂದುವರಿಯುವುದಿಲ್ಲ ಎಂದು ಹೈಕೋಟ್ ಈ ಹಿಂದೆ ಹೇಳಿತ್ತು.
ಹೈಕೋರ್ಟ್ನ ಸಚಿವ ಸ್ಥಾನಕ್ಕೆ ಸೇರ್ಪಡೆಯಾಗಲು ಅರ್ಹರಲ್ಲ ಎಂಬ ಆದೇಶವನ್ನು ಪ್ರಶ್ನಿಸಿ ಎ.ಎಚ್. ವಿಶ್ವನಾಥ್, ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಆದರೆ ಹೈಕೋರ್ಟ್ ಆದೇಶ ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್ ವಿಶ್ವನಾಥ್ ಅರ್ಜಿಯನ್ನು ವಜಾಗೊಳಿಸಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ವಿಶ್ವನಾಥ್ ಅವರು, ''ಸುಪ್ರೀಂ ಕೋರ್ಟ್ನ ಈ ಆದೇಶವನ್ನು ನಾನು ಸ್ವಾಗತಿಸುತ್ತೇನೆ. ಮುಂದಿನ ನಡೆಯ ಬಗ್ಗೆ ವಕೀಲರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು. ನಾನು ನಾಮ ನಿರ್ದೇಶಿತ ಸದಸ್ಯನಾದ ಹಿನ್ನೆಲೆ ಈ ತೊಂದರೆ ಎದುರಾಗಿದೆ. ಸದ್ಯ ನಾನು ಎಮ್ಎಲ್ಸಿಯಾಗಿಯೇ ಮುಂದುವರಿಯುತ್ತೇನೆ'' ಎಂದು ಹೇಳಿದ್ದಾರೆ.
ಜೆಡಿಎಸ್ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ವಿಶ್ವನಾಥ್ ಅವರು ವಿಧಾನಸಭೆ ಸ್ಪೀಕರ್ ಆಗಿದ್ದ ಕೆ.ಆರ್. ರಮೇಶ್ಕುಮಾರ್ ಅವರು ಅನರ್ಹಗೊಳಿಸಿದ 17 ಶಾಸಕರಲ್ಲಿ ಒಬ್ಬರಾಗಿದ್ದಾರೆ. ಬಳಿಕ ನಡೆದ ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ಅವರು ಸೋಲು ಕಂಡಿದ್ದು, ಕಳೆದ ವರ್ಷ ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.