ನವದೆಹಲಿ, ಜ.28 (DaijiworldNews/PY): "ಅಪ್ರಾಪ್ತೆಯ ಕೈಹಿಡಿದು ಪ್ಯಾಂಟ್ ಜಿಪ್ ತೆಗೆಯುವುದು ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಅಲ್ಲ. ಐಪಿಸಿಯ ಸೆಕ್ಷನ್ 354ರ ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಲಾಗುವುದು" ಎಂದು ಬಾಂಬೆ ಹೈಕೋರ್ಟ್ನ ನಾಗ್ಪುರ ನ್ಯಾಯಪೀಠ ತೀರ್ಪು ನೀಡಿದೆ.
ಸಾಂದರ್ಭಿಕ ಚಿತ್ರ
ನ್ಯಾ.ಪುಷ್ಪಾ ಗಣೆದಿವಲಾ ಅವರ ಏಕ ಸದಸ್ಯ ಪೀಠವು ಈ ಆದೇಶ ಹೊರಡಿಸಿದೆ.
50 ವರ್ಷದ ವ್ಯಕ್ತಿಯೋರ್ವ ಐದು ವರ್ಷದ ಬಾಲಕಿಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಪ್ಯಾಂಟ್ ಜಿಪ್ ತೆರೆಯುವ ಸಂದರ್ಭ ಸಿಕ್ಕಿಬಿದ್ದಿದ್ದಾನೆ ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿಚಾರಣಾ ನ್ಯಾಯಾಲಯವು ಆರೋಪಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ 25 ಸಾವಿರ ರೂ. ದಂಡವನ್ನು ವಿಧಿಸಬೇಕು ಎಂದು ಆದೇಶಿಸಿದೆ.
ಈ ಬಗ್ಗೆ ನ್ಯಾಯಮೂರ್ತಿ ಪುಷ್ಪಾ ಗಣೆದಿವಲಾ ಅವರ ಏಕ ಸದಸ್ಯ ನ್ಯಾಯಪೀಠ ವಿವರಣೆ ನೀಡಿದ್ದು, "ನೇರ ದೈಹಿಕ ಸಂಪರ್ಕ, ಸ್ಪರ್ಶಿಸುವುದು ಅಥವಾ ಸ್ತ್ರೀಯ ಗುಪ್ತಾಂಗವನ್ನು ಪ್ರವೇಶಿಸುವುದನ್ನು ಲೈಂಗಿಕ ಸಂಪರ್ಕ" ಎಂದಿದ್ದಾರೆ.
"ಐಪಿಸಿಯ ಸೆಕ್ಷನ್ 354 ರ ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಲಾಗುವುದು. ಆರೋಪಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗುವುದು" ಎಂದು ತೀರ್ಪು ನೀಡಿದೆ.
ಈ ಆದೇಶವನ್ನು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಹಾಗೂ ನ್ಯಾಯಮೂರ್ತಿ ಎ ಎಸ್ ಬೋಪಣ್ಣ ಮತ್ತು ವಿ. ರಾಮ ಸುಬ್ರಮಣಿಯನ್ ಅವರ ಅಧ್ಯಕ್ಷತೆಯ ನ್ಯಾಯಪೀಠವು ತಡೆಹಿಡಿದಿದೆ.
ಸದ್ಯ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಜ.19ರಂದು ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠ ನೀಡಿದ್ದ ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸಲು ಎಜಿಗೆ ಅನುಮತಿ ನೀಡಿದೆ.