ಮಂಗಳೂರು, ಜ.28 (DaijiworldNews/MB) : ಈ ಹಿಂದೆ ಉಳ್ಳಾಲವನ್ನು ಪಾಕಿಸ್ತಾನ ಎಂದು ಹೇಳಿದ್ದ ಆರ್ಎಸ್ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಈಗ ಮತ್ತೊಂದು ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
ಮಂಗಳೂರಿನ ಮಾತನಾಡಿದ ಭಟ್ ಅವರು, ''ಉಳ್ಳಾಲದ ಜನರಿಗೆ ತಾಕತ್ತಿದ್ದರೆ ಮುಸ್ಲಿಮೇತರರನ್ನು ಶಾಸಕರನ್ನಾಗಿ ಮಾಡಿ'' ಎಂದು ಸವಾಲೆಸೆದಿದ್ದಾರೆ.
''ಉಳ್ಳಾಲದಲ್ಲಿ ಪದೇ ಪದೇ ಮುಸ್ಲಿಮರು ಶಾಸಕರಾಗುತ್ತಿದ್ದಾರೆ. ಪಾಕಿಸ್ತಾನದಲ್ಲಿ ಈ ರೀತಿ ಮತ್ತೆ ಮತ್ತೆ ಮುಸ್ಲೀಮರೇ ಶಾಸಕರಾಗುತ್ತಾರೆ. ಇದೇ ಸ್ಥಿತಿ ಉಳ್ಳಾಲದಲ್ಲೂ ಶುರುವಾಗಿದೆ. ಉಳ್ಳಾಲ ಪಾಕಿಸ್ತಾನವಾಗುತ್ತಿದೆಯೇ ಎಂಬ ಭಯ ನಿರ್ಮಾಣವಾಗಿದೆ'' ಎಂದು ಪುನಃ ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದಾರೆ.
''ಉಳ್ಳಾಲದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ದೇವಸ್ಥಾನ ಮತ್ತು ದೈವಸ್ಥಾನಗಳ ಕಾಣಿಕೆ ಹುಂಡಿಗೆ ಬೇಡದ ವಸ್ತುಗಳನ್ನು ಹಾಕಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುವ ಕಾರ್ಯ ಮಾಡಲಾಗುತ್ತಿದೆ. ಹಾಗಾಗಿ ನಾವು ಈಗಲೇ ಎಚ್ಚೆತ್ತುಕೊಳ್ಳುವುದು ಒಳಿತು'' ಎಂದು ಹೇಳಿದ್ದಾರೆ.
''ವಿಭಜನೆಯಾಗುವ ಮೊದಲು ಭಾರತೀಯರಾಗಿದ್ದ ಪಾಕಿಸ್ತಾನದ ಜನರ ಮಾನಸಿಕತೆಯೂ ವಿಭಜನೆಯ ಬಳಿಕ ಬದಲಾಯಿತು. ಆ ಭೂಮಿ ಕೆಂಪಾಯಿತು. ಸಿಂಧೂ ನದಿಯಲ್ಲಿ ರಕ್ತ ಹರಿಯಿತು. ಅಲ್ಲಿ ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯಿತು. ಮತಾಂತರ ನಡೆಯಿತು. ದೇವಸ್ಥಾನವನ್ನು ನಾಶ ಮಾಡಿದರು, ಹಿಂದೂಗಳಿಗೆ ಬದುಕಲು ಕಷ್ಟವಾಗುವ ಸ್ಥಿತಿ ಅಲ್ಲಿ ನಿರ್ಮಾಣ ಮಾಡಲಾಯಿತು. ಅದೇ ವಾತಾವರಣ ಇಂದು ಉಳ್ಳಾಲದಲ್ಲಿ ಕಾಣುತ್ತಿದೆ'' ಎಂದು ಹೇಳಿದ್ದಾರೆ.