ಬೆಂಗಳೂರು, ಜ.28 (DaijiworldNews/PY): "ಶೀಘ್ರದಲ್ಲೇ ಶಾಲೆಯ ಶುಲ್ಕವನ್ನು ನಿಗದಿ ಮಾಡುತ್ತೇವೆ. ಈ ವಿಚಾರದಲ್ಲಿ ನಾವು ಅಂತಿಮ ಹಂತದಲ್ಲಿದ್ದೇವೆ" ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, "ಶುಲ್ಕ ವಿಚಾರ ಪೋಷಕರ ದೊಡ್ಡ ಸಮಸ್ಯೆಯಾಗಿದೆ. ಡೆಡ್ಲೈನ್ ನೀಡಿ ಪರಿಹಾರ ಮಾಡುವ ವಿಚಾರ ಇದಲ್ಲ" ಎಂದಿದ್ದಾರೆ.
"ನಮಗೆ ಶುಲ್ಕದ ವಿಚಾರದ ಬಗ್ಗೆ ದಿಢೀರ್ ಎಂದು ತೀರ್ಮಾನ ಕೈಗೊಳ್ಳಲಾಗುವುದಿಲ್ಲ. ಪೋಷಕರು ಪ್ರತಿಭಟನೆ ಮಾಡುವುದು ಬೇಡ. ಪ್ರತಿಭಟನೆ ನಡೆಸುವುದರಿಂದ ಪರಿಹಾರ ಸಿಗುವುದಿಲ್ಲ. ನಾವು ಪರಿಹಾರ ನೀಡುವ ಹಂತದಲ್ಲಿದ್ದೇವೆ" ಎಂದು ತಿಳಿಸಿದ್ದಾರೆ.
"ಶೀಘ್ರದಲ್ಲೇ ನಾವು ಶುಲ್ಕವನ್ನು ನಿಗದಿ ಮಾಡುತ್ತೇವೆ. ಯಾವುದೇ ಖಾಸಗಿ ಶಾಲೆಗಳ ಲಾಬಿಗೆ ಮಣಿದಿಲ್ಲ. ಖಾಸಗಿ ಅಥವಾ ಯಾವುದೋ ಲಾಬಿಗೆ ಮಣಿದಿದ್ದರೆ ನನಗೆ ಈ ಸ್ಥಾನೇ ಬೇಡ. ನಾನು ನಾಡಿನ ಮಕ್ಕಳ ಪೋಷಕರ ಪರವಾಗಿದ್ದೇನೆ. ಅವರ ಪರ ಕೆಲಸ ಮಾಡುತ್ತೇನೆ" ಎಂದು ಹೇಳಿದ್ದಾರೆ.